ದಿಟ್ಟ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶಿಸಿದೆ: ಕೆ.ಸಿ. ವೇಣುಗೋಪಾಲ್
ಗೌರಿ ಲಂಕೇಶ್ ಹತ್ಯೆ

ಕೊಚ್ಚಿ ಸೆ. 7: ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ದಿಟ್ಟ ತನಿಖೆ ನಡೆಸುವಂತೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶಿಸಿದೆ ಎಂದು ಎಐಸಿಸಿಯ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗುರುವಾರ ಹೇಳಿದ್ದಾರೆ.
ಗೌರಿ ಹಂತಕನಿಗೆ ಕಾನೂನಿನಂತೆ ಕಠಿಣ ಶಿಕ್ಷೆ ನೀಡಬೇಕು. ಕರ್ನಾಟಕ ಸರಕಾರ ಈ ದಿಶೆಯಲ್ಲಿ ದಿಟ್ಟ ಹೆಜ್ಜೆ ಇರಿಸಬೇಕು ಎಂದು ವೇಣುಗೋಪಾಲ್ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಗೃಹ ಸಚಿವ ರಾಮ ಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಂದೇಶವನ್ನು ತಲುಪಿಸಿದ್ದೇನೆ ಎಂದು ಅವರು ಹೇಳಿದರು.
ಲೋಕಸಭೆಯ ಹಿರಿಯ ಸಂಸದರೂ ಆಗಿರುವ ವೇಣುಗೋಪಾಲ್, ಬೆಂಗಳೂರಿನಲ್ಲಿ ಮಂಗಳವಾರ ಅಪರಿಚಿತ ದುಷ್ಕರ್ಮಿಗಳ ಗುಂಡಿನಿಂದ ಹತರಾದ ಗೌರಿ ಲಂಕೇಶ್ ಅವರ ಅಂತ್ಯ ಸಂಸ್ಕಾರದಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ನಾಯಕ ಪಾಲ್ಗೊಂಡಿಲ್ಲ ಎಂದರು.
ದೇಶದಲ್ಲಿ ಅಸ್ತಿತ್ವದಲ್ಲಿರುವ ದ್ವೇಷ ಹಾಗೂ ಅಸಹನೆ ಬಗ್ಗೆ ಗೌರಿ ಲಂಕೇಶ್ ವಿರೋಧದ ಅಭಿಪ್ರಾಯ ಹೊಂದಿದ್ದರು. ಧರ್ಮದ ಹೆಸರಲ್ಲಿ ದೇಶ ವಿಭಾಗಿಸುತ್ತಿರುವ ಕೋಮವಾದಿಗಳನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಅವರು ಹತ್ಯೆಯಾದರು ಎಂದು ಅವರು ಹೇಳಿದರು.
ಈ ಕೋಮವಾದಿಗಳ ಉದ್ದೇಶ ಇರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡುವುದು ಎಂದು ವೇಣುಗೋಪಾಲ್ ಹೇಳಿದರು.







