ಲಷ್ಕರ್, ಜೈಶ್ ನಿಯಂತ್ರಣ ಅಗತ್ಯ: ಪಾಕ್ ವಿದೇಶ ಸಚಿವ ಖವಾಜ ಆಸಿಫ್ ಅಭಿಮತ

ಇಸ್ಲಾಮಾಬಾದ್, ಸೆ. 7: ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಅಗತ್ಯವನ್ನು ಪಾಕಿಸ್ತಾನದ ವಿದೇಶ ಸಚಿವ ಖವಾಜ ಆಸಿಫ್ ಮನಗಂಡಿದ್ದಾರೆ. ಆಗ, ‘ನಮ್ಮ ಕೆಲಸಗಳನ್ನು ನಾವು ಮಾಡಿದ್ದೇವೆ’ ಎಂಬುದಾಗಿ ವಿಶ್ವ ಸಮುದಾಯಕ್ಕೆ ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂದು ಹೇಳಿದ್ದಾರೆ.
ಅವರು ‘ಜಿಯೋ ನ್ಯೂಸ್’ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಗಳು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್-ಖಾಯಿದ ಗುಂಪುಗಳಿಗೆ ಸಮವಾಗಿದೆ ಎಂಬ ‘ಬ್ರಿಕ್ಸ್’ ಘೋಷಣೆಯ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿವೆ ಎಂಬುದಾಗಿ ‘ಬ್ರಿಕ್ಸ್’ ಘೋಷಣೆ ಹೇಳಿತ್ತು.
ಭಯೋತ್ಪಾದನೆಯನ್ನು ನಿಭಾಯಿಸುವ ವಿಷಯದಲ್ಲಿ ಜಗತ್ತಿನಲ್ಲಿ ಬದಲಾವಣೆಗಳು ಆಗುತ್ತಿದ್ದು, ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಚೀನಾ ಮುಂತಾದ ನಮ್ಮ ಸ್ನೇಹಿತರನ್ನು ನಾವು ಇನ್ನೂ ಹೆಚ್ಚಿನ ‘ಪರೀಕ್ಷೆ’ಗೊಳಪಡಿಸುವುದು ಸಾಧ್ಯವಿಲ್ಲ ಎಂದರು.
‘‘ನಮ್ಮ ದೇಶದಲ್ಲಿರುವ ಇಂಥ ಸಂಘಟನೆಗಳ ಬಗ್ಗೆ ನಾವು ಕುರುಡರಾದರೆ, ನಾವು ಇಂಥ ಮುಜುಗರದ ಸ್ಥಿತಿಯನ್ನು ಮುಂದೆಯೂ ಎದುರಿಸುತ್ತಲೇ ಇರುತ್ತೇವೆ’’ ಎಂದರು.
ಹಿಂದಿನ ತಪ್ಪು ಮುಂದುವರಿಸುವುದು ಬೇಡ
‘‘ನಮ್ಮ ಹಿಂದಿನ ತಪ್ಪನ್ನು ಮುಂದುವರಿಸಬಾರದು’’ ಎಂದರು. 1980ರ ದಶಕದಲ್ಲಿ ಅಪ್ಘಾನಿಸ್ತಾನದಲ್ಲಿನ ಸೋವಿಯತ್ ಆಕ್ರಮಣ ಪಡೆಗಳ ವಿರುದ್ಧದ ಅಮೆರಿಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇರಿಕೊಂಡ ಬಳಿಕ ಭಯೋತ್ಪಾದಕ ಗುಂಪುಗಳಿಗೆ ಲಭಿಸಿದ ಉತ್ತೇಜನದ ಬಗ್ಗೆ ಅವರು ಪ್ರಸ್ತಾಪಿಸುತ್ತಿದ್ದರು.
‘‘ನಮ್ಮ ದೇಶದಲ್ಲಿ ಜೈಶೆ ಮುಹಮ್ಮದ್ ಮತ್ತು ಲಷ್ಕರೆ ತಯ್ಯಬ ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲೆ ನಾವು ಕೆಲವು ನಿರ್ಬಂಧಗಳನ್ನು ವಿಧಿಸಬೇಕು. ಆಗ, ನಾವು ಸರಿಯಾಗಿದ್ದೇವೆ ಎಂದು ಜಾಗತಿಕ ಸಮುದಾಯಕ್ಕೆ ಹೇಳಬುದಾಗಿದೆ’’ ಎಂದು ಪಾಕ್ ವಿದೇಶ ಸಚಿವರು ನುಡಿದರು.







