ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೆಡಿಎಸ್‍ಎಸ್ ನಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ, ಸೆ.7: ಪತ್ರಕರ್ತೆ, ಸಾಹಿತಿ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ, ಕೆಡಿಎಸ್‍ಎಸ್ ಕಾರ್ಯಕರ್ತರು ಕೂಡಲೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿ ಕೆಡಿಎಸ್‍ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಕೇಶವ್, ದೇಶದಲ್ಲಿ ಪ್ರಗತಿಪರ ಚಿಂತಕರು, ಸಾಹಿತಿಗಳು, ವಿಚಾರವಾದಿಗಳು ಹಾಗೂ ದೀನದಲಿತರ ಪರ ಹೋರಾಟಗಾರನ್ನು ಹತ್ಯೆಗೈಯ್ಯುತ್ತಿರುವುದು ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹತ್ಯೆಯೊಂದಿಗೆ ವೈಚಾರಿಕ ಸಂಘರ್ಷ ಕೊನೆಗೊಳ್ಳುವುದಿಲ್ಲ, ಮರೆಯಲ್ಲಿ ನಿಂತು ಗುಂಡುಹಾರಿಸುವ ಹೇಡಿಗಳಿಗೆ ಮಾತ್ರ ಮುಖವಾಡದ ಅಗತ್ಯವಿರುವುದು. ಮಾನವಹಕ್ಕು ಹೋರಾಟಗಾರರಂತೂ ಯಾವುದೇ ಮುಖವಾಡವಿಲ್ಲದೆ ನಿತ್ಯ ಮತ್ತಷ್ಟು ಕಿಚ್ಚಿನೊಂದಿಗೆ ಜನರ ಮುಂದೆ ಮುಕ್ತವಾಗಿ ನಿಲ್ಲುತ್ತಾರೆ ಎಂದರು.
ಡಾ.ಎಂ.ಎಂ. ಕಲಬುರ್ಗಿ, ಮಹಾರಾಷ್ಟ್ರದ ಪನ್ಸಾರೆ ಅವರುಗಳ ದಾರುಣ ಕೊಲೆ ಪ್ರಕರಣಗಳು ಪತ್ತೇ ಹಚ್ಚುವ ಹಂತದಲ್ಲಿ ಇರುವಾಗಲೇ ಪತ್ರಕರ್ತೆ ಗೌರಿಲಂಕೇಶ್ ಅವರನ್ನು ಹತ್ಯೆಗೈದಿರುವುದು ನಾಡಿನಲ್ಲಿ ಜನಪರ ಕಾಳಜಿ ಹೊಂದಿರುವವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದ ಅವರು, ಈ ಕೂಡಲೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಹಂತಕರನ್ನು ಪತ್ತೇ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿದೆ ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಸೊಪ್ಪಹಳ್ಳಿ ಮೂರ್ತಿ, ಸಂಚಾಲಕ ಕೆ.ಎಂ. ನಾರಾಯಣಸ್ವಾಮಿ, ಗಂಗರಾಜು, ಮುನಿಯಪ್ಪ, ನಾಗರಾಜ್, ಕೆಡಿಎಸ್‍ಎಸ್ ಮಹಿಳಾ ಘಟಕದ ತಾಲೂಕು ಸಂಚಾಲಕಿ ರತ್ನಮ್ಮ, ಶಶಿಕಲಾ, ಕೆ.ವಿ. ಭಾಗ್ಯಮ್ಮ, ಲಕ್ಷ್ಮೀದೇವಮ್ಮ, ಅಲ್ಪಸಂಖ್ಯಾತ ಘಟಕದ ಅಸ್ಲಾಂಪಾಷ ಸೇರಿದಂತೆ ಮತ್ತಿತರರಿದ್ದರು.







