ಕೆಆರ್‍ಎಸ್ ಜಲಾಶಯದಲ್ಲಿ 102 ಅಡಿ ನೀರು ಶೇಖರಣೆ: ಸಚಿವ ಎಂ.ಕೃಷ್ಣಪ್ಪ

ಮಂಡ್ಯ, ಸೆ.7: ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆಗೆ ನೀರು ಬಿಡುವ ಸಂಬಂಧ ಸೆ.8 ರಂದು ನಡೆಯುವ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ)ಯಲ್ಲಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದ್ದಾರೆ.
ಜಿಪಂ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಆರ್‍ಎಸ್ ಜಲಾಶಯದಲ್ಲಿ 102 ಅಡಿ ನೀರು ಶೇಖರಣೆಯಾಗಿದ್ದು, ಮುಂದೆ ಬೆಳೆಗೆ ನೀರು ಬಿಡಲು ಸಾಧ್ಯವೆ ಎಂಬುದನ್ನು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಕಳೆದ ಬಾರಿ ಅಣೆಕಟ್ಟೆಯಲ್ಲಿ 100 ಅಡಿ ನೀರು ತುಂಬದಿದ್ದ ಕಷ್ಟದ ಪರಿಸ್ಥಿತಿಯಲ್ಲೂ ಬೆಳೆಗೆ ನೀರು ಬಿಡಲಾಗಿತ್ತು. ಈ ಬಾರಿ ಕಟ್ಟೆಗೆ 102 ಅಡಿ ನೀರು ಬಂದಿದೆ. ಇನ್ನೂ ಒಳ ಹರಿವು ಬರುತ್ತಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಸಹ ಹಾಲಿ ಬೆಳೆದಿರುವ ಕಬ್ಬು, ಭತ್ತ ಸೇರಿದಂತೆ ಇತರೆ ಬೆಳೆ ಉಳಿಸಿಕೊಳ್ಳಲು ನೀರು ಬಿಡುವಂತೆ ನಿರ್ದೇಶನ ನೀಡಿದ್ದಾರೆ. ಶುಕ್ರವಾರ ಸಂಜೆ 5ಕ್ಕೆ ಐಸಿಸಿ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವ ಎಂ.ಕೃಷ್ಣಪ್ಪ ಸ್ಪಷ್ಟಪಡಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ನೀರಾವರಿ ಬೆಳೆಗಳಾದ ಭತ್ತ, ಕಬ್ಬು ಬೆಳೆಯದಂತೆ ರೈತರಿಗೆ ಸೂಚನೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ರಾಗಿ, ಜೋಳ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ, ಮುಂದೆ ಮಳೆ ಕೈಕೊಟ್ಟರೆ ನಾಲೆಗಳಿಗೆ ನೀರು ಹರಿಸುವುತ್ತೇವೆ ಎಂದು ಹೇಳುತ್ತಿಲ್ಲ. ಇದರಿಂದ ಮೊದಲೇ ಸಾಲದ ಸುಳಿಯಲ್ಲಿರುವ ರೈತರು ಮಳೆಯಾಗುತ್ತಿದ್ದರೂ ಬೆಳೆ ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕೆಆರ್‍ಎಸ್ ಭರ್ತಿಯಾಗಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವ ಅನಿವಾರ್ಯತೆ ಇದೆ. ಕಾವೇರಿ ನೀರಿನ ವಿಚಾರ ಅಂತರಾಜ್ಯ ವಿವಾದವಾಗಿರುವುದರಿಂದ ಬೆಳೆಗೆ ನೀರು ಬಿಡುತ್ತೇವೆ ಎಂದು ಘೋಷಣೆ ಮಾಡದೆ, ಕೆರೆಕಟ್ಟೆ ತುಂಬಿಸುವ ನೆಪದಲ್ಲಿ ಬೆಳೆಗೆ ನೀರು ಬಿಡುವುದು ಉತ್ತಮ ಎಂದು ಸಲಹೆ ಮಾಡಿದರು.
ನೊಟೀಸ್ ನೀಡಲು ಸೂಚನೆ: ಸಭೆಗೆ ಗೈರಾಗಿದ್ದ ಹೇಮಾವತಿ ನಾಲಾ ವಿಭಾಗದ ಮುಖ್ಯ ಕಾರ್ಯಪಾಲಕ ಅಭಿಯಂತರ ಮತ್ತು ಕಾರ್ಯಪಾಲಕ ಅಭಿಯಂತರರಿಗೆ ನೊಟೀಸ್ ನೀಡುವಂತೆ ಸಚಿವ ಎಂ.ಕೃಷ್ಣಪ್ಪ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ಸೂಚಿಸಿದರು.
754 ಡೆಂಗ್ ಪ್ರಕರಣ: ಜಿಲ್ಲೆಯಲ್ಲಿ ಈವರೆಗೆ 754 ಡೆಂಗ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 13 ಶಂಕಿತ ಡೆಂಗ್ ಸಾವು ಎಂದು ಗುರುತಿಸಲಾಗಿದೆ ಎಂದು ಪ್ರಭಾರ ಡಿಎಚ್‍ಓ ಡಾ.ರೋಚನಾ ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ವಿಜಯ್, ಜಿಪಂ ಸಿಇಓ ಬಿ.ಶರತ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸು ಲೋಚನಾ ಮತ್ತಿತರರು ಉಪಸ್ಥಿತರಿದ್ದರು.







