ಗೌರಿ ಹಂತಕನನ್ನು ಬಂಧಿಸಿ, ನೇಣಿಗೇರಿಸಿ: ಕೇಂದ್ರ ಸಚಿವ ಅಠಾವಳೆ

ಹೈದರಾಬಾದ್, ಸೆ. 67: ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದವರನ್ನು ಕೂಡಲೇ ಬಂಧಿಸಬೇಕು ಹಾಗೂ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠೇವಳೆ ಆಗ್ರಹಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಮಂಗಳವಾರ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದ್ದಿದ್ದರು.
ಗೌರಿ ಲಂಕೇಶ್ ಅವರ ಹತ್ಯೆ ವಿಷಾದಕರ. ನಾನು ಅದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅಠಾವಳೆ ಹೇಳಿದ್ದಾರೆ.
ಸಿದ್ಧಾಂತದ ವಿರುದ್ಧ ಸಿದ್ಧಾಂತದ ಮೂಲಕವೇ ಹೋರಾಡಬೇಕು. ಕೆಲವರನ್ನು ಹತ್ಯೆ ಮಾಡುವ ಮೂಲಕ ಚಿಂತನೆಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಗೌರಿ ಹತ್ಯೆಯ ಬಗ್ಗೆ ಕರ್ನಾಟಕ ಸರಕಾರ ಕೂಲಂಕಷ ತನಿಖೆ ನಡೆಸಬೇಕು. ಆರೋಪಿ ಎಲ್ಲೇ ಇದ್ದರೂ ಕೂಡಲೇ ಬಂಧಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥ ಅಠಾವಳೆ ಹೇಳಿದ್ದಾರೆ.
ಕೊಲೆಗಾರರನ್ನು ಬಂಧಿಸಬೇಕು ಹಾಗೂ ನೇಣುಗಂಬಕ್ಕೆ ಏರಿಸಬೇಕು. ಈ ಘಟನೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳಬಾರದು ಎಂದು ಅವರು ಹೇಳಿದರು.





