ತ್ವರಿತಗತಿಯಲ್ಲಿ ಕಾಮಗಾರಿ ಪೂರೈಸಿ: ಸಂಸದ ಜಿ.ಎಂ ಸಿದ್ದೇಶ್ವರ

ದಾವಣಗೆರೆ, ಸೆ.7: ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರೈಸಿ ಹಾಗೂ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರಬೇಕೆಂದು ಸಂಸದ ಜಿ.ಎಂ ಸಿದ್ದೇಶ್ವರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರೀಶೀಲನಾ ಕಾರ್ಯಕ್ರಮದಲ್ಲಿ ತಮ್ಮ ಅನುದಾನದಡಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳು ಮುಗಿದರೆ ಮುಂದಿನ ಪಾಲಿನ ಅನುದಾನ ಕೇಳಲು ಅನುಕೂಲವಾಗುತ್ತದೆ. ಹಳೆ ಕಾಮಗಾರಿಗಳು ಪೂರ್ಣಗೊಂಡಿಲ್ಲವೆಂದರೆ ನನಗೆ ಬರುವ ಮುಂದಿನ ಸಾಲಿನ ಅನುದಾನವನ್ನು ನೀಡುವುದಿಲ್ಲ. ಹಾಗಾಗಿ ಶೀಘ್ರಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಲು ಸೂಚಿಸಿದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2014-15ನೆ ಸಾಲಿನಲ್ಲಿ ಕೈಗೊಳ್ಳಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಸಿ.ಸಿ ರಸ್ತೆ, ವಿದ್ಯಾರ್ಥಿನಿಲಯಗಳ ಕೊಠಡಿಗಳ ನಿರ್ಮಾಣ, ಸಮುದಾಯ ಭವನ, ರಂಗಮಂದಿರ, ಪಶು ಆಹಾರ ಘಟಕ, ಬಸ್ ತಂಗುದಾಣ ಮುಂತಾದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ತಾಂತ್ರಿಕ ತೊಂದರೆಯಿರುವ ಕೆಲವೊಂದು ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಹೇಳಿದರು.
ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ ತಾಲೂಕುಗಳ ಕಾಮಗಾರಿಗಳನ್ನು ಪೂರೈಸಲು ಕಾರ್ಯಪಾಲ ಅಭಿಯಂತರರು, ಕೆಆರ್ ಐಡಿಎಲ್ ದಾವಣಗೆರೆ ಇವರಿಗೆ ಹಾಗೂ ಹೊನ್ನಾಳಿ ಮತ್ತು ಹರಪನಹಳ್ಳಿ ತಾಲೂಕುಗಳ ಕಾಮಗಾರಿಗಳನ್ನು ಪೂರೈಸಲು ಯೋಜನಾ ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ ಇವರುಗಳಿಗೆ ವಹಿಸಲಾಗಿದ್ದು, ಕಾಮಗಾರಿಗಳಿಗೆ ಒಟ್ಟು ಈಗಾಗಲೇ ಅಂದಾಜು ಮೊತ್ತ 79.00 ಲಕ್ಷಗಳು ಅನುದಾನ ಬೇಕಾಗಿದ್ದು, 51.755 ಲಕ್ಷ ರೂ. ಅನುದಾನ ಮಾತ್ರ ಬಿಡುಗಡೆಯಾಗಿದೆ. ಹಾಗೂ ಇನ್ನು 27.25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಬಾಕಿ ಇದೆ ಎಂದರು.
2015-16 ನೇ ಸಾಲಿನ ಕಾಮಗಾರಿಗಳನ್ನು ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ ಮತ್ತು ಜಗಳೂರು ತಾಲೂಕುಗಳ ಕಾಮಗಾರಿಗಳನ್ನು ಪೂರೈಸಲು ಕಾರ್ಯಪಾಲ ಅಭಿಯಂತರರು, ಕೆಆರ್ ಐಡಿಎಲ್ ದಾವಣಗೆರೆ ಇವರಿಗೆ ಹಾಗೂ ದಾವಣಗೆರೆ, ಹರಿಹರ, ಚನ್ನಗಿರಿ ಮತ್ತು ಹರಪನಹಳ್ಳಿ ತಾಲೂಕುಗಳ ಕಾಮಗಾರಿಗಳನ್ನು ಪೂರೈಸಲು ಯೋಜನಾ ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ ಇವರುಗಳಿಗೆ ವಹಿಸಲಾಗಿದ್ದು, ಕಾಮಗಾರಿಗಳಿಗೆ ಒಟ್ಟು ಈಗಾಗಲೇ ಅಂದಾಜು ಮೊತ್ತ 322.50 ಲಕ್ಷ ರೂ. ಅನುದಾನ ಬೇಕಾಗಿದ್ದು, 238.13 ಲಕ್ಷಗಳ ಅನುದಾನ ಮಾತ್ರ ಬಿಡುಗಡೆಯಾಗಿದೆ. ಹಾಗೂ ಇನ್ನು 84.37 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಬಾಕಿ ಇದೆ ಹಾಗೂ 2016-17ನೆ ಸಾಲಿನ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು ಕಾಲಮಿತಿಯೊಳಗೆ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಕೆಆರ್ ಐಡಿಎಲ್ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಜರಿದ್ದರು.







