ಸರಕಾರದ ಅವೈಜ್ಞಾನಿಕ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ: ಪ್ರವೀಣ ಬೆಣ್ಣೆ

ಶಿಕಾರಿಪುರ, ಸೆ.7: ಸರ್ಕಾರದ ಅವೈಜ್ಞಾನಿಕ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳು ಅದರ ಪರಿಣಾಮ ಎದುರಿಸುವಂತಾಗಿದ್ದು, ಹೊಸ ನೀತಿ ಸುತ್ತೋಲೆ ಜಾರಿಗೆ ಮುನ್ನಾ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಎಚ್ಚರಿಕೆಯಿಂದ ವರ್ತಿಸಬೇಕಾಗಿದೆ ಎಂದು ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಪ್ರವೀಣ ಬೆಣ್ಣೆ ಆಗ್ರಹಿಸಿದರು.
ಪದವಿಪೂರ್ವ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ಏಕಾಏಕಿ ನಿರ್ಭಂದಿಸಿದ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ಗುರುವಾರ ಪಟ್ಟಣದ ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಕಾಲೇಜು ತರಗತಿ ಆರಂಭವಾಗಿ 3-4 ತಿಂಗಳು ಪೂರ್ಣಗೊಂಡಿದ್ದು, ಅರ್ಧವಾರ್ಷಿಕ ಪರೀಕ್ಷೆಯ ಸಮೀಪದಲ್ಲಿ ಸರ್ಕಾರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಕಟ್ಟುನಿಟ್ಟಾಗಿ ನಿರ್ಭಂದಿಸಿ ಆಂಗ್ಲ ಮಾದ್ಯಮದಲ್ಲಿ ಮಾತ್ರ ಉತ್ತರಿಸುವಂತೆ ಹೊರಡಿಸಿದ ಹೊಸ ಸುತ್ತೋಲೆ ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ದೂರಿರು.
ಸರ್ಕಾರ ಕಾಲೇಜು ಆರಂಭದಲ್ಲಿ ಹೊಸ ನೀತಿಯನ್ನು ಪ್ರಕಟಿಸಿದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ತೀರ್ಮಾನವನ್ನು ಕೈಗೊಳ್ಳಲಿದ್ದು, ಇದೀಗ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗುವ ಸಂದರ್ಭದಲ್ಲಿ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳು ದಿಕ್ಕುತೋಚದಂತಾಗಿದ್ದು, ಈ ಕೂಡಲೇ ಸರ್ಕಾರ ಸುತ್ತೋಲೆಯನ್ನು ವಾಪಾಸು ಪಡೆದು ವಿದ್ಯಾರ್ಥಿಗಳ ಹಿತಕಾಪಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಘೋಷಣೆ ಮೂಲಕ ಮೆರವಣಿಗೆಯಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯಲ್ಲಿ ಉತ್ತರಿಸಲು ಅವಕಾಶಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯದರ್ಶಿ ಹರೀಶ್‌ಗೌಡ,ವಿದ್ಯಾರ್ಥಿ ಮುಖಂಡ ಪುನೀತ್,ಮಹೇಶ್, ಸಿಂದು, ಸಹನ, ಶ್ವೇತಾ, ಅವಿನಾಶ್, ಪವನಕುಮಾರ್ ಮತ್ತಿತರರು ಹಾಜರಿದ್ದರು.







