ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಹೊರತರುವ ಹೊಣೆ ಶಿಕ್ಷಕರ ಮೇಲಿದೆ: ಎಚ್.ಎನ್.ನಟೇಶ್

ಗುಂಡ್ಲುಪೇಟೆ, ಸೆ.7: ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರಕಟಗೊಳಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಎಚ್.ಎನ್.ನಟೇಶ್ ಹೇಳಿದರು.
ಪಟ್ಟಣದ ಕೆ.ಎಸ್.ನಾಗರತ್ನಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆಯನ್ನು ಹೊರತಲು ಸೂಕ್ತ ವೇದಿಕೆಯ ಅಗತ್ಯವಿದೆ. ಇಂಥಾ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ತಮ್ಮ ಸುಪ್ತ ಕಲೆಯನ್ನು ಪ್ರದರ್ಶಿಸುವ ಮೂಲಕ ಬೆಳಿಕಿಗೆ ಬರಲು ಸಾಧ್ಯವಾಗುತ್ತಿದೆ. ಮಾಧ್ಯಮಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೇದಿಕೆ ಒದಗಿಸುತ್ತಿದ್ದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುತ್ತಿವೆ. ತಮ್ಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಗುರುತಿಸಿ ಹೊರತರುವ ಹೊಣೆ ಶಿಕ್ಷಕರು ನಿರ್ವಹಿಸಬೇಕು ಎಂದರು.
ಈ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಿರುಪತಿ ತಿಮ್ಮಪ್ಪ, ಅಕ್ಕಮಹಾದೇವಿ, ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೇಶಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ಮೆಚ್ಚುಗೆಗಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಇಒ ಹಾಲತಿ ಸೋಮಶೇಖರ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್, ಬಿಆರ್‍ಪಿ ನಂದೀಶ್, ಶಿಕ್ಷಣ ಸಂಯೋಜಕರಾದ ಗೋಪಾಲ್, ಮಾದೇಗೌಡ ಹಾಗೂ ಇತರರು ಇದ್ದರು.





