ಸಚಿವ ರಮಾನಾಥ ರೈ ವೈಫಲ್ಯಗಳನ್ನು ವರದಿ ಮಾಡಿದ್ದಕ್ಕಾಗಿ ಸೇಡಿನ ಕ್ರಮ: ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ
‘ವಾರ್ತಾಭಾರತಿ’ ವರದಿಗಾರನ ಬಂಧನ

“ಜೆಡಿಎಸ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ”
ಮಂಗಳೂರು, ಸೆ.8: “ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಂಟ್ವಾಳ ಪೊಲೀಸರ ವೈಫಲ್ಯವನ್ನು ‘ವಾರ್ತಾಭಾರತಿ’ ನಿರಂತರವಾಗಿ ವರದಿ ಮಾಡುತ್ತಾ ಬಂದಿದೆ. ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ಸಚಿವ ರಮಾನಾಥ ರೈ ವಿಫಲವಾಗಿರುವ ಬಗ್ಗೆ ‘ವಾರ್ತಾಭಾರತಿ’ ವರದಿಗಳನ್ನು, ಸಂಪಾದಕೀಯವನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ರೈ ಮತ್ತು ಜಿಲ್ಲೆಯ ಪೊಲೀಸ್ ಇಲಾಖೆ ಜಂಟಿಯಾಗಿ ಬಂಟ್ವಾಳ ವರದಿಗಾರನ ಮೇಲೆ ಸೇಡಿನ ಕ್ರಮ ಕೈಗೊಂಡಿದೆ ಎಂದು ಜೆಡಿಎಸ್ ದ,ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ ಆರೋಪಿಸಿದ್ದಾರೆ.
“ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ 4 ವರ್ಷಗಳಿಂದ ಸಂಘಪರಿವಾರದ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಲು ವಿಫಲರಾಗಿದ್ದಾರೆ, ತಕ್ಷಣವೇ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು. ಅವರ ಬದಲಿಗೆ ವಸಂತ ಬಂಗೇರ, ಮೊಯ್ದಿನ್ ಬಾವ ಅಥವಾ ಐವನ್ ಡಿಸೋಜರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಬೇಕು. ನಾನು ಜೈಲಿಗೆ ಹೋಗಿಲ್ಲ, ಬ್ಲೂ ಫಿಲಂ ನೋಡಿಲ್ಲ ಎಂದು ರೈ ಹೇಳುತ್ತಾರೆ, ಅವರು ನೋಡಬೇಕು ಎಂದು ನಾವು ಹೇಳುವುದಿಲ್ಲ, ಸಂಘಪರಿವಾರಿಗಳನ್ನು ಹದ್ದುಬಸ್ತಿನಲ್ಲಿಡಲು, ಜಿಲ್ಲೆಯ ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲರಾಗಿರುವ ಸಚಿವ ರೈ ಜಿಲ್ಲೆಯ ಜನರಿಗೆ ಅಗತ್ಯವಿಲ್ಲ. ಕೊಣಾಜೆ ಪೊಲೀಸ್ ಠಾಣೆಯ ಮುಂದೆ ನಡೆದಿದ್ದ ಪ್ರತಿಭಟನೆಯಲ್ಲಿ ‘ಜಿಲ್ಲೆಗೆ ಬೆಂಕಿ ಹಚ್ಚುವ’ ಹೇಳಿಕೆ ನೀಡಿದ್ದ ಸಂಸದ ನಳಿನ್ ವಿರುದ್ಧ ಅಂದೇ ಕ್ರಮ ಕೈಗೊಂಡಿದ್ದರೆ ಕದ್ರಿ ಠಾಣೆಯ ಪೊಲೀಸ್ ಅಧಿಕಾರಿಯ ಮುಂದೆ ಅವರು ಕೂಗಾಡಿ ದರ್ಪ ಪ್ರದರ್ಶಿಸುತ್ತಿರಲಿಲ್ಲ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಮರೀಚಿಕೆಯಾಗಿದೆ” ಎಂದು ಮುಹಮ್ಮದ್ ಕುಂಞಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಕದಡುವವರನ್ನು ನಿಯಂತ್ರಿಸುವಲ್ಲಿ ಸಚಿವ ರಮಾನಾಥ ರೈ ಹಾಗೂ ಯು.ಟಿ,ಖಾದರ್ ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ವೈಫಲ್ಯವನ್ನು ವರದಿ ಮಾಡಿದ್ದ ಸೇಡನ್ನು ತೀರಿಸಿಕೊಳ್ಳಲು ಸಚಿವ ರೈ ಹಾಗೂ ಪೊಲೀಸ್ ಇಲಾಖೆ ಕೈಗೊಂಡ ಸೇಡಿನ ಕ್ರಮ ಇದಾಗಿದೆ ಎಂದು ಆರೋಪಿಸಿರುವ ಮುಹಮ್ಮದ್ ಕುಂಞಿ, ಬಂಟ್ವಾಳದಲ್ಲಿ ನಡೆದಿದ್ದ ಅಹಿತಕರ ಘಟನೆಗಳ ಸಂದರ್ಭ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸಚಿವ ರಮಾನಾಥ ರೈ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದ್ದರ ಬಗ್ಗೆ ವಾರ್ತಾಭಾರತಿ ವರದಿ ಮಾಡಿ, ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿತ್ತು. ಇದೇ ಸೇಡಿನ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ಯ ಪತ್ರಕರ್ತನನ್ನು ಬಂಧಿಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹೀನ ದಾಳಿ ಇದಾಗಿದೆ. ಪತ್ರಕರ್ತನ ಬಂಧನದ ವಿರುದ್ಧ ಜೆಡಿಎಸ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದ್ದಾರೆ.







