ಇದನ್ನು ಓದಿದ ಬಳಿಕ ನೀವೆಂದೂ ಬೆಳಗಿನ ಉಪಹಾರ ತಪ್ಪಿಸುವುದಿಲ್ಲ.....
ಬಹಳಷ್ಟು ಜನರು ಎಷ್ಟು ವ್ಯಸ್ತರಾಗಿರುತ್ತಾರೆಂದರೆ ಅವರಿಗೆ ಬೆಳಗಿನ ಉಪಹಾರ ತಿನ್ನಲೂ ಪುರಸೊತ್ತಿರುವುದಿಲ್ಲ! ಅವರ ಪಾಲಿಗೆ ಆರೋಗ್ಯಕ್ಕಿಂತ ತಮ್ಮ ಕಾಲೇಜು ಅಥವಾ ಕೆಲಸದ ಸ್ಥಳಗಳಿಗೆ ಸಕಾಲದಲ್ಲಿ ತಲುಪುವುದೇ ಮುಖ್ಯವಾಗಿರುತ್ತದೆ. ಇದರರ್ಥ ನೀವು ಸಕಾಲದಲ್ಲಿ ಕಾಲೇಜು ಅಥವಾ ಕೆಲಸದ ಸ್ಥಳವನ್ನು ತಲುಪಬಾರದು ಎಂದಲ್ಲ. ಆದರೆ ಇದಕ್ಕಾಗಿ ನೀವು ನಿಮ್ಮ ಬೆಳಗಿನ ಉಪಹಾರವನ್ನು ತಪ್ಪಿಸಕೂಡದು.
ಬೆಳಗಿನ ಉಪಹಾರವನ್ನು ಸೇವಿಸದ ವ್ಯಕ್ತಿಗಳು ತಮ್ಮ ಶರೀರಕ್ಕೆ ಒಳ್ಳೆಯದರ ಬದಲಿಗೆ ಹೆಚ್ಚು ಹಾನಿಯನ್ನೇ ಉಂಟು ಮಾಡುತ್ತಾರೆ. ನಿಮಗೆ ಹಸಿವೆಯಾಗಿದ್ದರೂ ಆಗಿರದಿದ್ದರೂ ಬೆಳಗಿನ ತಿಂಡಿಯನ್ನು ಏಕೆ ತಪ್ಪಿಸಬಾರದು ಎನ್ನುವುದಕ್ಕೆ ಹಲವಾರು ಮುಖ್ಯ ಕಾರಣಗಳಿವೆ.
ಬೆಳಗಿನ ಉಪಹಾರ ನಿಮ್ಮ ದಿನಕ್ಕೆ ಉತ್ತಮ ಆರಂಭವನ್ನು ನೀಡುವುದಷ್ಟೇ ಅಲ್ಲ, ಅದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ ಮತ್ತು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ
ಪ್ರತಿದಿನ ಬೆಳಿಗ್ಗೆ ಉಪಹಾರ ಸೇವನೆಯು ನಿಮ್ಮ ಶರೀರದ ತೂಕ ಹೆಚ್ಚುವುದನ್ನು ತಡೆಯುತ್ತದೆ. ಪ್ರತಿದಿನ ಉಪಹಾರ ಸೇವನೆಯನ್ನು ತಪ್ಪಿಸಿಕೊಳ್ಳುವವರು ಹೆಚ್ಚಿನ ತೂಕ ಹೊಂದುವ ಸಾಧ್ಯತೆಯಿದೆ ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ. ಬೆಳಗಿನ ಉಪಹಾರವು ದಿನವಿಡೀ ಏನನ್ನಾದರೂ ತಿನ್ನುತ್ತಿರಬೇಕೆಂಬ ಬಯಕೆಯನ್ನು ತಡೆಯುತ್ತದೆ.
ಶಕ್ತಿಯನ್ನು ಹೆಚ್ಚಿಸುತ್ತದೆ
ರಾತ್ರಿಯ ಊಟದ ಬಳಿಕ ಮರುದಿನ ಮಧ್ಯಾಹ್ನದ ಊಟದವರೆಗೂ ಖಾಲಿಹೊಟ್ಟೆ ಯಲ್ಲಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆಹಾರವು ನಮ್ಮ ಶರೀರಕ್ಕೆ ಇಂಧನವಾಗಿದೆ. ಪೋಷಕಾಂಶಗಳಿಂದ ಕೂಡಿದ ಬೆಳಗಿನ ಉಪಹಾರ ನಮ್ಮ ಶರೀರಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ಟೈಪ್ 2 ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ
ಶೇ.90ರಷ್ಟು ಜನರು ಅತಿಯಾದ ತೂಕ ಮತ್ತು ದೈಹಿಕ ಜಡತೆ ಮೂಲಕಾರಣವಾಗಿ ರುವ ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ. ಬೆಳಗಿನ ಉಪಹಾರದ ಅನಿಯಮಿತ ಸೇವನೆಗೂ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
ಹೃದ್ರೋಗವನ್ನು ತಡೆಯುತ್ತದೆ
ಆರೋಗ್ಯಕರವಾದ ಬೆಳಗಿನ ಉಪಹಾರ ಸೇವಿಸುವುದರಿಂದ, ಶರೀರದ ತೂಕ ಹೆಚ್ಚದಂತೆ ನೋಡಿಕೊಳ್ಳುವುದರಿಂದ ಮತ್ತು ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದರ ಮೂಲಕ ಹೃದ್ರೋಗವನ್ನು ತಡೆಯಬಹುದಾಗಿದೆ.
ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ
ಬೆಳಗಿನ ಉಪಹಾರವು ನಮ್ಮ ಶರೀರಕ್ಕೆ ಇಂಧನವನ್ನೊದಗಿಸುವ ಜೊತೆಗೆ ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಉತ್ಸಾಹವನ್ನು ನೀಡುವ ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ನೆರವಾಗುತ್ತದೆ.