ಕಾಗೋಡು ತಿಮ್ಮಪ್ಪ ಅವರಿಗೆ ಜನರು ಬಿದ್ದು ಸತ್ತರೆ ಸಾಯಲಿ ಎನ್ನುವ ಮನಸ್ಥಿತಿ ಇರಬೇಕು: ಗೋಪಾಲಕೃಷ್ಣ

ಸಾಗರ, ಸೆ.8: ಈ ರಸ್ತೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಪ್ರತಿಬಾರಿ ಓಡಾಡುತ್ತಾರೆ. ಆದರೆ ಸೇತುವೆಯ ಒಂದು ಭಾಗ ಗುಂಡಿ ಬಿದ್ದು ಅಪಾಯಕಾರಿ ಸ್ಥಿತಿ ಇದ್ದರೂ ಇದನ್ನು ಗಮನಿಸದೆ ಇರುವುದು ದುರಾದೃಷ್ಟಕರ ಸಂಗತಿ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಬಸವನಹೊಳೆ ಸೇತುವೆ ಮೇಲ್ಭಾಗದಲ್ಲಿ ಗುಂಡಿ ಬಿದ್ದಿರುವುದನ್ನು ಸಾರ್ವಜನಿಕರ ದೂರಿನ ಮೇಲೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿದ ಅವರು, ಬಸವನ ಹೊಳೆ ಸೇತುವೆ ದುಸ್ಥಿತಿ ಬಗ್ಗೆ ಅನೇಕ ಬಾರಿ ಮಾಧ್ಯಮಗಳು ಗಮನ ಸೆಳೆದಿವೆ. ಸ್ಥಳೀಯ ವ್ಯಾಪಾರಿಗಳು ಸಹ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೂ ಸೇತುವೆ ಮೇಲ್ಭಾಗ ದುರಸ್ಥಿ ಮಾಡಿಲ್ಲ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ಬಸವನಹೊಳೆ ಸೇತುವೆ ಅತ್ಯಂತ ಪ್ರಮುಖ ಜಾಗವಾಗಿದೆ. ಸೇತುವೆಯ ಒಂದು ಭಾಗದಲ್ಲಿ ದೊಡ್ಡ ಗುಂಡಿ ಬಿದ್ದಿದೆ. ಈ ಗುಂಡಿಯ ಮೇಲೆಯೆ ದೊಡ್ಡ ವಾಹನಗಳು ಸಂಚರಿಸುವುದರಿಂದ ಸೇತುವೆ ಕುಸಿಯುವ ಭೀತಿ ಸಹ ಇದೆ. ಪ್ರತಿದಿನ ಹತ್ತಾರು ಜನರು ಈ ಗುಂಡಿಯೊಳಗೆ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದರೂ ಆಡಳಿತ ನಡೆಸುವವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಅವರಿಗೆ ಜನರು ಬಿದ್ದು ಸತ್ತರೆ ಸಾಯಲಿ ಎನ್ನುವ ಮನಸ್ಥಿತಿ ಇರಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಸವನಹೊಳೆ ಡ್ಯಾಂನಿಂದ ವರದಹಳ್ಳಿ ವೃತ್ತದವರೆಗೆ ರಸ್ತೆಯಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದ್ದು, ಪ್ರತಿದಿನ ಅಪಘಾತವಾಗುತ್ತಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಿಂದ ಅಥವಾ ನಗರಸಭೆಯಿಂದ ರಿಪೇರಿ ಮಾಡಿಸುವ ಕೆಲಸ ಮಾಡಿಲ್ಲ. ತಕ್ಷಣ ಸೇತುವೆ ಮೇಲಿನ ಗುಂಡಿಯನ್ನು ಮುಚ್ಚದೆ ಹೋದಲ್ಲಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಪ್ರಮುಖರು ಹಾಜರಿದ್ದರು.







