ಹಿರಿಯ ನಟ ಸುದರ್ಶನ್ ವಿಧಿವಶ

ಬೆಂಗಳೂರು, ಸೆ.8: ಹಿರಿಯ ನಟ ಆರ್.ಎನ್.ಸುದರ್ಶನ್(78) ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದ ಸುದರ್ಶನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರ್.ಎನ್.ಸುದರ್ಶನ್ ವಿಜಯನಗರದ ವೀರಪುತ್ರ, ನಗುವ ಹೂವು, ಮರೆಯದ ದೀಪಾವಳಿ ಮುಂತಾದ 60 ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಲ್ಲದೆ ಚಾಣಕ್ಯ, ಕರ್ತವ್ಯ, ಬ್ರಹ್ಮ, ವಿಷ್ಣು ಮಹೇಶ್ವರ ಮುಂತಾದ ಚಿತ್ರಗಳಲ್ಲಿ ಖಳನಟನಾಗಿಯೂ ಗಮನ ಸೆಳೆದಿದ್ದ ಸುದರ್ಶನ್ ಅವರು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಮೇ 2, 1939ರಲ್ಲಿ ಜನಿಸಿದ ರಟ್ಟಿಹಳ್ಳಿ ನಾಗೇಂದ್ರ ಸುದರ್ಶನ್ ಬಾಲ್ಯದಿಂದಲೂ ತಮ್ಮ ತಂದೆ ದಿವಂಗತ ಆರ್.ಎನ್.ನಾಗೇಂದ್ರರಾವ್ ಅವರಿಂದ ಪ್ರಭಾವಿತರಾಗಿ ಸಿನೆಮಾ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಅನನ್ಯ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸುದರ್ಶನ್‌ರ ನಿಧನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಖ್ಯಾತ ನಟ, ನಟಿಯರು, ತಂತ್ರಜ್ಞರು ಅವರ ಸಂತಾಪ ಸೂಚಿಸಿದ್ದಾರೆ.







