ಬಿಜೆಪಿಗೆ ಸತ್ಯಕ್ಕಿಂತ ರಾಜಕೀಯ ಸ್ವಾರ್ಥವೇ ಮುಖ್ಯ: ಕೆ.ಜೆ.ಜಾರ್ಜ್
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ

ಬೆಂಗಳೂರು, ಸೆ.8: ಬಿಜೆಪಿ ಮುಖಂಡರಿಗೆ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸತ್ಯ ತಿಳಿಯುವುದಕ್ಕಿಂತ ರಾಜಕೀಯ ಸ್ವಾರ್ಥ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕಿಡಿಕಾರಿದರು.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ. ಸಿಬಿಐ ವರದಿ ಬಂದ ಮೇಲೆ ಸತ್ಯಾಸತ್ಯತೆಗಳು ಹೊರಗೆ ಬರಲಿದೆ. ಆದರೆ, ಬಿಜೆಪಿ ನಾಯಕರಿಗೆ ಸತ್ಯ ಬೇಕಾಗಿಲ್ಲ. ಕೇವಲ ರಾಜಕೀಯ ಸ್ವಾರ್ಥ ಹಿತಾಸಕ್ತಿಗಾಗಿ ಇಲ್ಲಸಲ್ಲದ ಆರೋಪದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಬಳಿ ರಾಜೀನಾಮೆ ಕೇಳಿರಲಿಲ್ಲ. ಆದರೆ, ಆ ಸಂದರ್ಭದಲ್ಲಿ ಗೃಹ ಸಚಿವನಾಗಿದ್ದ ನಾನು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದೆ. ಈಗ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹವಾಗಿದೆ. ಶೀಘ್ರವೇ ಸತ್ಯ ಹೊರಕ್ಕೆ ಬರಲಿದೆ ಎಂದರು.
ಸಿಎಂ ಕೇಳಿದರೆ ರಾಜೀನಾಮೆ: ನಾನು ಮೊದಲು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಆ ನಂತರ ಸಚಿವ. ಪಕ್ಷಕ್ಕಿಂತ ಅಧಿಕಾರ ದೊಡ್ಡದಲ್ಲ. ಹೀಗಾಗಿ ಗಣಪತಿ ಪ್ರಕರಣದಲ್ಲಿ ಪ್ರತಿಪಕ್ಷಗಳು ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿವೆ. ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ಪಡಿಸಿ ಯಾರಿಗೂ ಕೇಳುವ ಅಧಿಕಾರವಿಲ್ಲ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೇಳಿದರೆ ಆ ಕ್ಷಣವೇ ಕೊಡಲು ಸಿದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸೌಹಾರ್ದತೆ ಕಾಪಾಡುವುದು ಕೇಂದ್ರದ ಕರ್ತವ್ಯ
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಗಲಭೆಗಳು ಹಾಗೂ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ, ಈ ಬಗ್ಗೆ ಕೇಂದ್ರ ಸರಕಾರ ಮೌನ ವಹಿಸಿರುವುದು ಸರಿಯಲ್ಲ. ಹಾಗೂ ಕೆಲವೊಂದು ಕೋಮು ಗಲಭೆ ಪ್ರಕರಣಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದು ಸರಿಯಾದ ಕ್ರಮವಲ್ಲ . ದೇಶದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡುವುದು ಕೇಂದ್ರದ ಜವಾಬ್ದಾರಿಯಾಗಿರುತ್ತದೆ.
-ಕೆ.ಜೆ.ಜಾರ್ಜ್, ಸಚಿವ ಬೆಂಗಳೂರು ನಗರಾಭಿವೃದ್ಧಿ







