ಮುಕ್ತ ಮನಸ್ಸಿನೊಂದಿಗೆ ಕಾಶ್ಮೀರಕ್ಕೆ ಭೇಟಿ: ರಾಜನಾಥ್ ಸಿಂಗ್

ಹೊಸದಿಲ್ಲಿ,ಸೆ.8: ಸರಕಾರವು ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಬಯಸಿರುವುದರಿಂದ ತಾನು ಮುಕ್ತ ಮನಸ್ಸಿನಿಂದ ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದೇನೆ ಮತ್ತು ತನ್ನೊಂದಿಗೆ ಸಂವಾದ ನಡೆಸಲು ಯಾರೇ ಬಯಸಿದರೂ ಅವರನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅವರು ಶನಿವಾರದಿಂದ ಜಮ್ಮು-ಕಾಶ್ಮೀರಕ್ಕೆ ನಾಲ್ಕು ದಿನಗಳ ಭೇಟಿ ನೀಡುತ್ತಿದ್ದಾರೆ.
ಶ್ರೀನಗರ, ಅನಂತನಾಗ್, ಜಮ್ಮು ಮತ್ತು ರಾಜೌರಿಗಳಿಗೆ ಪ್ರಯಾಣಿಸಲಿರುವ ಸಿಂಗ್ ಅವರು ನಾಗರಿಕರು, ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ನಾಯಕರು, ಉದ್ಯಮಿಗಳು ಮತ್ತು ಇತರರನ್ನು ಭೇಟಿಯಾಗಲಿದ್ದಾರೆ.
ಸಿಂಗ್ ಅವರು ರಾಜ್ಯಪಾಲ ಎನ್.ಎನ್.ವೋರಾ ಮತ್ತು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನೂ ಭೇಟಿಯಾಗಲಿದ್ದಾರೆ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು 2015ರಲ್ಲಿ ಪ್ರಕಟಿಸಿದ್ದ 80,000 ಕೋ.ರೂ.ಗಳ ಅಭಿವೃದ್ಧಿ ಪ್ಯಾಕೇಜ್‌ಗೆ ಸಂಬಂಧಿಸಿದ ಕಾರ್ಯಗಳ ಪ್ರಗತಿಯನ್ನು ಮತ್ತು ರಾಜ್ಯದಲ್ಲಿಯ ಭದ್ರತಾ ಸ್ಥಿತಿಯನ್ನು ಸಿಂಗ್ ಪರಿಶೀಲಿಸಲಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಮುಂಚೂಣಿಯಲ್ಲಿರುವ ವಿವಿಧ ಭದ್ರತಾ ಪಡೆಗಳೊಂದಿಗೂ ಅವರು ಮಾತುಕತೆಗಳನ್ನು ನಡೆಸಲಿದ್ದಾರೆ ಎಂದೂ ಹೇಳಿಕೆಯು ತಿಳಿಸಿದೆ.
ಅವರು ರವಿವಾರ ಮುಖ್ಯಮಂತ್ರಿ ಮತ್ತು ಸೇನೆ, ಸಿಆರ್‌ಪಿಎಫ್ ಹಾಗೂ ಬಿಎಸ್‌ಎಫ್‌ನ ಉನ್ನತ ಅಧಿಕಾರಿಗಳೊಂದಿಗೆ ಸಮಗ್ರ ಭದ್ರತಾ ಸ್ಥಿತಿ ಪುನರ್‌ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಿಂಗ್ ಕಾಶ್ಮೀರ ಸ್ಥಿತಿಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಶ್ರೀನಗರದಲ್ಲಿ ಅವರೊಂದಿಗೆ ಸಂವಾದ ನಡೆಸುವ ಸಾಧ್ಯತೆಯೂ ಇದೆ.
ಸೋಮವಾರ ಜಮ್ಮುವಿಗೆ ತೆರಳುವ ಮುನ್ನ ಅವರು ಶ್ರೀನಗರದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಜೌರಿಯಲ್ಲಿ ಬಿಎಸ್‌ಎಫ್ ಶಿಬಿರವೊಂದಕ್ಕೂ ಅವರು ಭೇಟಿ ನೀಡಲಿದ್ದಾರೆ.







