ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಿಸುವ ಕನಸು ಕಾಣಬೇಕು: ಡಾ. ಎಂ. ಲೋಕೇಶ್
ಶಿವಮೊಗ್ಗ, ಸೆ. 8: ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜ್‍ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಯುವ ರೆಡ್‍ಕ್ರಾಸ್ ಘಟಕಕ್ಕೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಚಾಲನೆ ನೀಡಿದರು.
ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿವಿಧ ಸಂಘಗಳ ಮೂಲಕ ಸ್ವಯಂ ಸೇವಕರಾಗಬೇಕು. ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ರೆಡ್‍ಕ್ರಾಸ್, ಎನ್ನೆಸ್ಸೆಸ್, ಸ್ಕೌಟ್ಸ್ ಗೈಡ್ಸ್ ಮುಂತಾದವುಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ರೆಡ್‍ಕ್ರಾಸ್ ಘಟಕ ಕೇವಲ ರಕ್ತದಾನ ಮಾಡಲು ಮಾತ್ರ ಸೀಮಿತಗೊಂಡಿಲ್ಲ. ಬದಲಾಗಿ ಸಮಾಜಮುಖಿ ಕೆಲಸಗಳನ್ನು ಮಾಡಬಹುದು. ಕಾಲೇಜಿನ ಕ್ಯಾಂಪಸ್‍ನಲ್ಲಿ ಬೆಳೆದು ನಿಂತಿರುವ ಪಾರ್ಥೇನಿಯಂಯನ್ನು ನಿರ್ಮೂಲನೆ ಮಾಡಬೇಕು. ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಜನರಿಗೆ ಅರಿವು ಮೂಡಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ತಡೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ರೆಡ್‍ಕ್ರಾಸ್ ಸದಸ್ಯರಾಗಿ ಕೆಲಸ ಮಾಡುವ ಮೂಲಕ ಅದರ ಪ್ರಯೋಜನ ಸಮಾಜಕ್ಕೆ ಸಿಗುವಂತೆ ಮಾಡಬೇಕು. ಇಂದಿನ ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಸೇರಿಕೊಳ್ಳುವುದು ಅಂತಿಮ ಗುರಿಯಾಗಿದೆ. ಇದಕ್ಕಿಂತ ಮುಖ್ಯವಾದುದು ಸಮಾಜ ಮತ್ತು ಜನರ ಮಧ್ಯೆ ಇದ್ದು ಕೆಲಸ ಮಾಡುವುದಾಗಿದೆ. ನಗರದಲ್ಲಿ ಭಿಕ್ಷುಕರ ಕೇಂದ್ರವಿದ್ದು, ಅದಕ್ಕೆ ಭಿಕ್ಷುಕರನ್ನು ಸೇರಿಸುವ ಕೆಲಸದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು. ಉತ್ತಮ ಸಮಾಜವನ್ನು ನಿರ್ಮಿಸುವ ಕನಸು ಕಾಣಬೇಕು. ಆಗಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಯುವರೆಡ್‍ಕ್ರಾಸ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಈ ವೇಳೆ ವಿಪತ್ತು ನಿರ್ವಹಣೆಯಲ್ಲಿ ಯುವಜನರ ಪಾತ್ರ ಎಂಬ ವಿಷಯದ ಬಗ್ಗೆ ಹೋಂಗಾಡ್ಸ್ ಕಮಾಂಡೆಂಟ್ ಹಾಲಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಲಾ ಕಾಲೇಜು ಪ್ರಾಚಾರ್ಯ ಕೆ.ಎಚ್. ಪಾಂಡುರಂಗನ್ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಪ್ರಸನ್ನಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ.ಕೆ.ಎನ್.ಮಹದೇವಸ್ವಾಮಿ, ಯುಜಿಸಿ ಮತ್ತು ಮ್ಯಾಕ್ ಸಂಚಾಲಕ ಪ್ರೊ. ಸಿರಾಜ್‍ಅಹ್ಮದ್ ಉಪಸ್ಥಿತರಿದ್ದರು.







