ದೇಶದ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ಪಾತ್ರ ಮುಖ್ಯ: ಡಾ.ಸ್ಯಾಮ್ ಪಿತ್ರೋಡ

ಬೆಂಗಳೂರು, ಸೆ.8: ಭಾರತದ ಸಮಗ್ರ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ಪಾತ್ರ ಪ್ರಮುಖವಾಗಿದೆ. ದೇಶದ ಮುಂದಿನ ತಲೆಮಾರಿಗೆ ಬೇಕಾದಂತಹ ಅವಶ್ಯಕತೆಗಳನ್ನು ಪೂರೈಸಲು ಸಿದ್ಧವಾಗಬೇಕಾದರೆ ಅನಿವಾಸಿ ಭಾರತೀಯರ ಅಭಿವೃದ್ಧಿ ಪರ ದೂರದೃಷ್ಟಿ ಮತ್ತು ಅವರ ಆಲೋಚನೆಗಳನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಜ್ಞಾನ ಆಯೋಗದ ಮಾಜಿ ಅಧ್ಯಕ್ಷ ಡಾ.ಸ್ಯಾಮ್ ಪಿತ್ರೋಡ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಅಮೆರಿಕಾದ ಡಲ್ಲಾಸ್‌ನಲ್ಲಿ ‘ಕರ್ನಾಟಕ ಓವರ್‌ಸೀಸ್ ಕಾಂಗ್ರೆಸ್ ಚಾಪ್ಟರ್ ಯುಎಸ್‌ಎ’ಗೆ ಚಾಲನೆ ನೀಡಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಅನಿವಾಸಿ ಭಾರತೀಯರು ಪಣ ತೊಡಬೇಕು ಎಂದು ಕರೆ ನೀಡಿದ ಅವರು, ಕರ್ನಾಟಕ ಓವರ್‌ಸೀಸ್ ಕಾಂಗ್ರೆಸ್ ಚಾಪ್ಟರ್ ಅಸ್ತಿತ್ವಕ್ಕೆ ಬಂದಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿಗೌಡ್ ಮಾತನಾಡಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಮಹತ್ವದ್ದು. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಭಾರತದಲ್ಲಿ ವಿರೋಧ ಪಕ್ಷವು ಸಕ್ರಿಯವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಜಾರಿಗೆ ತಂದ ನೋಟು ಅಮಾನ್ಯೀಕರಣದ ಪರಿಣಾಮವಾಗಿ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಕುಟುಂಬಗಳು, ಗುಡಿ ಕೈಗಾರಿಕೆಗಳು, ಸಣ್ಣ ಸಣ್ಣ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ದೂರಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಪ್ರಗತಿಪರ ಕಾರ್ಯಕ್ರಮಗಳ ಮೂಲಕ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು, ವಿವಿಧ ಭಾಗ್ಯಗಳ ಯೋಜನೆಗಳಡಿಯಲ್ಲಿ ಜಾರಿಗೆ ತಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಮಾತನಾಡಿ, ಕರ್ನಾಟಕ ಸರಕಾರವು ದೇಶದ ಎಲ್ಲ ರಂಗದಲ್ಲೂ ಪ್ರಥಮವೆಂಬ ಖ್ಯಾತಿಗೆ ಪಾತ್ರವಾಗಿದೆ. ವಿದೇಶಿ ನೇರ ಬಂಡವಾಳವನ್ನು ಕರ್ನಾಟಕ ಹೆಚ್ಚು ಆಕರ್ಷಿಸುತ್ತಿದೆ. ನಿರಂತರವಾಗಿ ಮುಖ್ಯಮಂತ್ರಿ ಎಲ್ಲ ವರ್ಗದ ಜನರ ಜೊತೆ ಸಂಪರ್ಕವನ್ನಿಟ್ಟುಕೊಂಡು ಅವರಿಗೆ ಸ್ಪಂದಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಓವರ್‌ಸೀಸ್ ಕಾಂಗ್ರೆಸ್ ಚಾಪ್ಟರ್ ಯುಎಸ್‌ಎಗೆ ಚಾಲನೆ ನೀಡುತ್ತಿರುವುದರಿಂದ, ಇನ್ನು ಹೆಚ್ಚು ಹೆಚ್ಚು ಅನಿವಾಸಿ ಭಾರತೀಯರು, ಕನ್ನಡಿಗರ ಬೆಂಬಲವನ್ನು ನಿರೀಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ನೇತೃತ್ವದಲ್ಲಿ 2018ರಲ್ಲಿ ಜರುಗಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹಮ್ಮಿಕೊಳ್ಳಲಾದ ಜನಪರ ಹಾಗೂ ಕರ್ನಾಟಕದ ಎಲ್ಲ ವರ್ಗದ ಜನರ ಏಳಿಗೆಗೆ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರತಿ ಮತದಾರನ ವಿವೇಚನೆ ತರಬೇಕಾಗಿದೆ. ಅಂತಹ ಜವಾಬ್ದಾರಿಯುತ ಕೆಲಸವನ್ನು ಮಾಡಿದರೆ, ಮತ್ತೆ ಮತದಾರನೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುತ್ತಾನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಓವರ್‌ಸೀಸ್ ಕಾಂಗ್ರೆಸ್ ಚಾಪ್ಟರ್ ಯುಎಸ್‌ಎ ಅಧ್ಯಕ್ಷ ಸತೀಶ್ ನಂಜಪ್ಪ, ಡಾ.ದಯಾನಂದ್ ನಾಯ್ಕೆ, ಕೆಎಸ್‌ಎಂಡಿ ಅಧ್ಯಕ್ಷ ಡಾ.ಶ್ರೀಕಾಂತ್ ದೇವಂಗಿ, ಸದಸ್ಯ ಡಾ.ರಾಮಕೃಷ್ಣ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







