ನರೋಡ ಗಾಂವ್ ದೊಂಬಿ ಪ್ರಕರಣ: ಸೆ.12ರಂದು ವಿಚಾರಣೆಗೆ ಹಾಜರಾಗಲು ಅಮಿತ್ ಶಾಗೆ ಸೂಚನೆ

ಅಹ್ಮದಾಬಾದ್, ಸೆ.8: 2002ರಲ್ಲಿ ನಡೆದಿದ್ದ ನರೋಡ ಗಾಂವ್ ದೊಂಬಿ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ವಿಶೇಷ ನ್ಯಾಯಾಲಯವೊಂದು ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿಗೆ ತಿಳಿಸಿದೆ. ಶಾ ಅವರು ಕೊಡ್ನಾನಿ ಪರ ಸಾಕ್ಷಿದಾರರಾಗಿದ್ದಾರೆ. 11 ಮಂದಿಯ ಹತ್ಯೆ ನಡೆದಿರುವ ನರೋಡ ಗಾಂವ್ ದೊಂಬಿ ಪ್ರಕರಣದಲ್ಲಿ ಕೊಡ್ನಾನಿ ಪ್ರಧಾನ ಆರೋಪಿಯಾಗಿದ್ದಾರೆ. ಹತ್ಯಾಕಾಂಡ ನಡೆದಾಗ ತಾನು ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಸಾಕ್ಷಾಧಾರ ಸಹಿತ ನಿರೂಪಿಸಲು ಶಾ ಮತ್ತು ಇತರ 13 ಮಂದಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಕರೆಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೊಡ್ನಾನಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ, ಇದು ಅಂತಿಮ ಅವಕಾಶ. ಇನ್ನು ವಿಚಾರಣೆ ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮೊದಲು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಬಿ.ದೇಸಾಯಿ ಸೆ.8ರ ದಿನ ನಿಗದಿಪಡಿಸಿದರೂ, ಬಳಿಕ ಕೊಡ್ನಾನಿ ಕೋರಿಕೆ ಮೇರೆಗೆ ಸೆ.12ರವರೆಗೆ ಅವಕಾಶ ನೀಡಲು ಒಪ್ಪಿದರು.





