ಗೌರಿ ಲಂಕೇಶ್ ಹತ್ಯೆ ಖಂಡಿಸಿ ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದಿಂದ ಪ್ರತಿಭಟನೆ

ಸೊರಬ, ಸೆ.8: ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ, ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತೆಯ ಹತ್ಯೆ ಅಘಾತಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಾಲೂಕು ಸಂಘ ಖಂಡಿಸುತ್ತದೆ. ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದ್ದು, ಅವರ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಹೊರಬೇಕು. ದಿಟ್ಟಪತ್ರಕರ್ತೆ ಹಾಗೂ ಶೋಷಿತರ ಪರ ಹೋರಾಟಗಾರ್ತಿಯನ್ನು ಹತ್ಯೆ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಕ್ತಹರಿಸುವ ಮೂಲಕ ಪತ್ರಕರ್ತರನ್ನು ಹೆದರಿಸುವ ಪ್ರಯತ್ನಕ್ಕೆ ಪತ್ರಕರ್ತರು ಜಗ್ಗುವುದಿಲ್ಲ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಶಾಸಕ ಮಧುಬಂಗಾರಪ್ಪ, ತಾಪಂ ಅಧ್ಯಕ್ಷೆ ನಯನಾಶ್ರೀಪಾದಹೆಗಡೆ, ಕೆ.ಮಂಜುನಾಥ, ಕೆ.ಜಿ.ಲೋಲಾಕ್ಷಮ್ಮ, ಆರ್.ಶ್ರೀಧರಹುಲ್ತಿಕೊಪ್ಪ, ರೈತಸಂಘದ ಉಮೇಶ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಶಾಸಕ ಮಧು ಬಂಗಾರಪ್ಪ ಮಾತನಾಡಿ, ಈ ಘಟನೆಯನ್ನು ತಾವು ತೀವ್ರವಾಗಿ ಖಂಡಿಸುತ್ತೇನೆ. ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜದ ಅಂಕು-ಡೂಂಕುಗಳನ್ನು ತಿದ್ದಿ ಸರಿದಾರಿಗೆ ತರುವ ಪತ್ರಕರ್ತರ ಪ್ರಯತ್ನ ಅನನ್ಯವಾದದ್ದು. ಪತ್ರಕರ್ತರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪತ್ರಕರ್ತೆ ಗೌರಿಲಂಕೇಶ್ ಅವರ ಹತ್ಯೆಗೈದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅವರನ್ನು ಸರ್ಕಾರ ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ಪತ್ರಕತ್ರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಯು.ಎಂ. ನಟರಾಜ್, ಪತ್ರಕರ್ತರಾದ ಮಹೇಶ ಗೋಖಲೆ, ಮುಹಮ್ಮದ್ ಆರೀಫ್, ಯು.ಎನ್. ಲಕ್ಷ್ಮೀಕಾಂತ, ಜಿ.ಎಂತೋಟಪ್ಪ, ಶಿವಪ್ಪ ಹಿತ್ಲರ್, ಶ್ರೀಪಾದ ಬಿಚ್ಚುಗತ್ತಿ, ಹೆಚ್.ಕೆ.ಬಿ.ಸ್ವಾಮಿ, ಸಂದೀಪ ಯು.ಎಲ್., ರಾಜೇಂದ್ರ ಜೈನ್, ಬಣ್ಣದ ಬಾಬು, ನೋಪಿಶಂಕರಎಂ.ಎಲ್, ಪ್ರವೀಣಕುಮಾರ, ರಾಘವೇಂದ್ರ, ರವಿ, ಚಿದಾನಂದಗೌಡ, ರಾಘವೇಂದ್ರ ಬಾಪಟ್, ರಂಗಸ್ವಾಮಿ, ಅನ್ಸರ್ ಸೊಪ್ಪಿನಕೇರಿ ಮತ್ತಿತರರು ಪಾಲ್ಗೊಂಡಿದ್ದರು.







