ಸೆ.9: ‘ಕಾರವಾನ್-ಎ-ಮೊಹಬ್ಬತ್’ ಮಂಗಳೂರಿಗೆ
ಮಂಗಳೂರು, ಸೆ.8: ಆಹಾರ ಮತ್ತು ವಿಚಾರದ ನೆಲೆಯಲ್ಲಿ ನಡೆಸಲಾಗುತ್ತಿರುವ ಸಾರ್ವಜನಿಕ ಥಳಿತ ಹಾಗೂ ಇದಕ್ಕೆ ಸಮ್ಮತಿ ಸೂಚಿಸುತ್ತಿರುವ ಸಾರ್ವಜನಿಕ ಮೌನದ ವಿರುದ್ಧ, ದೇಶದ ಶಾಂತಿಪ್ರಿಯ ನಾಗರಿಕರು ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್‌ರ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ‘ಕಾರವಾನ್-ಎ-ಮೊಹಬ್ಬತ್’ ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ. ಸೆ.4ರಂದು ಅಸ್ಸಾಂನ ನೆಲ್ಲಿ ಎಂಬಲ್ಲಿ ಆರಂಭವಾದ ಈ ಕಾರವಾನ್ ಅಸ್ಸಾಂ, ಝಾರ್ಖಂಡ್, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಹಾದು ಅ.2ರಂದು ಪೋರ್‌ಬಂದರಿನಲ್ಲಿ ಸಮಾಪ್ತಿಗೊಳ್ಳಲಿದೆ.
ಸೆ.9ರಂದು ‘ಕಾರವಾನ್-ಎ-ಮೊಹಬ್ಬತ್’ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ‘ಸಮರಸ ಮಂಗಳೂರು’ ಇವರೊಂದಿಗೆ ಪೂರ್ವಾಹ್ನ 11ಕ್ಕೆ ಜಂಟಿಯಾಗಿ ಕೋಮುದಳ್ಳುರಿಗೆ ತುತ್ತಾದ ಒಂದೆರಡು ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ನಗರದ ರೋಶನಿ ನಿಲಯ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್ ಮತ್ತು ಚಿಂತಕ ಜೆ. ರಾಜಶೇಖರ್ ವಿಷಯ ಮಂಡಿಸಲಿದ್ದಾರೆ.





