ಗೌರಿ ಲಂಕೇಶ್ ಹತ್ಯೆ ಪ್ರಕರಣ: ರಾಹುಲ್ ಆರೋಪಕ್ಕೆ ಸಚಿವ ರವಿಶಂಕರ್ ಆಕ್ಷೇಪ

ಹೊಸದಿಲ್ಲಿ, ಸೆ. 8: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವರ ಹೇಳಿಕೆಗೆ ಸಂಬಂಧಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್, ಸರಕಾರದ ಸಮ್ಮತಿಯೊಂದಿಗೆ ಗೌರಿ ಲಂಕೇಶ್ ನಕ್ಸಲರ ಶರಣಾಗತಿಗೆ ಪ್ರಯತ್ನಿಸುತ್ತಿದ್ದರೇ?, ಸಮ್ಮತಿ ನೀಡಿದ್ದರೆ, ಅವರಿಗೆ ಯಾಕೆ ಭದ್ರತೆ ನೀಡಿಲ್ಲ ಎಂದು ನಾವು ಕರ್ನಾಟಕದ ಮುಖ್ಯಮಂತ್ರಿ ಅವರಲ್ಲಿ ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಹೇಳಿರುವ ಪ್ರಸಾದ್ ಅವರು, ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಪೂರ್ವಾಗ್ರಹ ಪೀಡಿತ ಹಾಗೂ ದುರುದ್ದೇಶಪೂರಿತ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿರುವ ಪ್ರಸಾದ್, ತನಿಖೆ ಆರಂಭವಾಗುವುದಕ್ಕೆ ಮುನ್ನವೇ ರಾಹುಲ್ ಗಾಂಧಿ ಅವರು ಗೌರಿ ಲಂಕೇಶ್ ಹತ್ಯೆಗೆ ಆರ್‌ಎಸ್‌ಎಸ್ ಹಾಗೂ ಬಲಪಂಥೀಯ ಸಿದ್ಧಾಂತ ಕಾರಣ ಎಂದು ಹೇಳಿದ್ದಾರೆ. ಹೀಗೆ ಹೇಳಿಕೆ ನೀಡುವುದರಿಂದ ಸಿಟ್‌ನಿಂದ ನಾವು ಪಾರದರ್ಶಕ ತನಿಖೆ ನಿರೀಕ್ಷಿಸಬಹುದೇ ಎಂದು ಕರ್ನಾಟಕದ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸುತ್ತಿದ್ದೇನೆ ಎಂದರು.
ಪ್ರತಿ ಹತ್ಯೆಯನ್ನು ಖಂಡಿಸುವುದು ಸರಿಯಾದುದು. ಆದರೆ, ಕೇರಳ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆಯಾದಾಗ ನನ್ನ ಉದಾರವಾದಿ ಸ್ನೇಹಿತರು ಯಾಕೆ ವೌನವಾದರು ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.







