ಸೆ.12ರಂದು ‘ನಾನು ಗೌರಿ’ ಪ್ರತಿರೋಧ ಸಮಾವೇಶ

ಬೆಂಗಳೂರು, ಸೆ. 8: ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿದೆ ವಿಶೇಷ ತನಿಖಾ ತಂಡ(ಸಿಟ್)ದ ನೇತೃತ್ವದಲ್ಲೇ ತ್ವರಿತ ತನಿಖೆ ನಡೆಸಿ, ಕೂಡಲೇ ಹಂತಕರನ್ನು ಬಂಧಿಸಬೇಕು ಎಂದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ, ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ.
ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಹಂತಕರನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದೆ ಗೌರಿ ಲಂಕೇಶ್ ಹತ್ಯೆಗೂ ಕಾರಣವಾಗಿದೆ ಎಂಬುದನ್ನು ರಾಜ್ಯ ಸರಕಾರ ಮನಗಂಡು, ಎರಡೂ ಕೃತ್ಯಗಳ ತನಿಖೆಯನ್ನು ತೀವ್ರಗೊಳಿಸಬೇಕು ಮತ್ತು ಕ್ಷಿಪ್ರವಾಗಿ ಹಂತಕರನ್ನು ಪತ್ತೆ ಮಾಡಬೇಕು ಎಂದು ವೇದಿಕೆ ಆಗ್ರಹಿಸಿದೆ.
ಗೌರಿ ಹತ್ಯೆಯಿಂದ ನಾವೆಲ್ಲರೂ ಆಘಾತಗೊಂಡಿದ್ದು, ಆಕ್ರೋಶಗೊಂಡಿದ್ದೇವೆ. ಗೌರಿಯವರ ವಿಚಾರಗಳು, ಚಿಂತನೆಗಳು, ಜೀವಪರವಾದ ನಿಲುವುಗಳನ್ನು ವಿಚಾರಗಳ ಮೂಲಕ ಎದುರಿಸಲಾಗದ ಶಕ್ತಿಗಳು ಬಂದೂಕಿನ ಮೊರೆ ಹೋಗಿರುವುದು ಹೇಡಿತನ. ಸೋಲಿನ ಲಕ್ಷಣವಾಗಿದೆ. ತಲೆಗೆ ಗುಂಡಿಟ್ಟರೆ ವಿಚಾರವನ್ನು, ಎದೆಗೆ ಗುಂಡಿಟ್ಟರೆ ಹೃದಯವಂತಿಕೆಯನ್ನು ಕೊಲ್ಲಬಹುದು ಎಂದು ಹಂತಕರು ಯೋಚಿಸಿದ್ದರೆ ಅದು ಅವರ ಮೂರ್ಖತನ ಎಂದು ಟೀಕಿಸಲಾಗಿದೆ.
ಗೌರಿ ಹತ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿರುವ ಆಘಾತಕಾರಿ ಬೆಳವಣಿಗೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ ಗತಿಸಿದಾಗ, ಕಲಬುರ್ಗಿ ಹತ್ಯೆ ವೇಳೆ ಇದೇ ರೀತಿ ವಿಕೃತ ಮನಸ್ಥಿತಿ ವಿಜೃಂಭಿಸಿತ್ತು. ಹತ್ಯೆಯನ್ನು ಸಂಭ್ರಮಿಸುವುದೆಂದರೆ ಹತ್ಯೆಗೆ ಪ್ರಚೋದನೆ ನೀಡಿದಂತೆ. ಹಾಗಾಗಿ ಹತ್ಯೆಯನ್ನು ಸಂಭ್ರಮಿಸುತ್ತಿರುವ ಶಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಕೊಲೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ತನಿಖೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಗೌರಿ ಹತ್ಯೆಯ ಕಾರಣಗಳ ಬಗ್ಗೆ ಊಹಾಪೋಹಗಳನ್ನು ಹರಿಯಲು ಬಿಟ್ಟು ಹತ್ಯೆಯ ತನಿಖೆಯನ್ನು ದಾರಿತಪ್ಪಿಸುವ ಹುನ್ನಾರವನ್ನು ನಡೆಸಲಾಗುತ್ತಿದೆ ಹಾಗೂ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬೇಡಿಕೆ ತೂರಿಬಿಡಲಾಗುತ್ತಿದೆ. ಸಿಬಿಐ ಕೇಂದ್ರ ಸರಕಾರದ ಪಂಜರದ ಗಿಳಿಯಾಗಿದ್ದು, ತನ್ನ ವಿರೋಧಿಗಳ ಧ್ವನಿ ಅಡಗಿಸಲು ದುರ್ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಗೌರಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವುದು ಬೇಡ ಎಂದು ವೇದಿಕೆ ಹೇಳಿದೆ.
ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ ಸಿಎಂಗೆ ನೀಡಿರುವ ಮನವಿಗೆ ಕೆ.ನೀಲಾ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಡಾ.ವಾಸು, ವೀರಸಂಗಯ್ಯ, ಎನ್. ಮುನಿಸ್ವಾಮಿ, ಅನಂತ ನಾಯ್ಕಾ, ಕೆ.ವೈ.ನಾರಾಯಣಸ್ವಾಮಿ, ಶ್ರೀಪಾದಭಟ್, ಕೆ.ಶರೀಫಾ, ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ, ಕೆ.ಎಲ್.ಅಶೋಕ, ಸಲ್ಮಾ ಸೇರಿದಂತೆ ಇನ್ನಿತರರು ಸಹಿ ಹಾಕಿದ್ದಾರೆ.
ಸೆ.12ಕ್ಕೆ ಪ್ರತಿರೋಧ ಸಮಾವೇಶ
‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಖಂಡಿಸಿ ಸೆ.12ರಂದು ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆ ಹಾಗೂ ಇಲ್ಲಿನ ಸ್ವಾತಂತ್ರ ಉದ್ಯಾನವನದ ಹಿಂಬಾಗದಲ್ಲಿರುವ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶವನ್ನು ಏರ್ಪಡಿಸಲಾಗಿದೆ’.







