ಸಂಸದನಿಂದ ’ಗೂಂಡಾ ಸಂಸ್ಕೃತಿ’ ಪ್ರಧಾನಿಗೆ ದೂರು: ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ
ಪುತ್ತೂರು, ಸೆ. 8: ಜಿಲ್ಲೆಯ ಸಾಮರಸ್ಯದ ಬದುಕಿಗೆ ಧಕ್ಕೆ ತರುವ ರೀತಿಯಲ್ಲಿ ಗೂಂಡಾ ಸಂಸ್ಕೃತಿಯಿಂದ ಪೊಲೀಸರೊಂದಿಗೆ ವರ್ತಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪ್ರತಾಪ್ ಸಿಂಹ ಭಯೋತ್ಪಾದಕರಾಗಿ ಹೊರಹೊಮ್ಮುತ್ತಿದ್ದಾರೆ. ದೇಶದ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತೆ ವರ್ತಿಸಿದ ಇಂತಹ ವ್ಯಕ್ತಿಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಕಾನೂನಿನ ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸೆಗಿದ ಇವರ ವಿರುದ್ಧ ಪ್ರಧಾನಮಂತ್ರಿಗಳಿಗೆ ದೂರು ನೀಡಲಾಗುವುದು. ಇದಕ್ಕೆ ಸ್ಪಂದನೆ ಸಿಗದಿದ್ದರೆ ರಾಷ್ಟ್ರಪತಿಯವರಿಗೂ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರು ಚಲೋ ಮಾಡಿದ ಉದ್ದೇಶ ಏನು ಎಂಬುವುದೇ ಅರ್ಥವಾಗುತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವರ್ತನೆ ನಮ್ಮ ಸಂಸದರು ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತಾಗಿದೆ. ಇವರ ಗೂಂಡಾ ಪ್ರವೃತ್ತಿ ನೋಡಿದರೆ ಇವರೊಬ್ಬ ನಾಯಕರಾ ಎನ್ನುವಂತಿತ್ತು. ಇಂತವರಿಗೆ ಅಧಿಕಾರ ಕೊಟ್ಟರೆ ರಾಜ್ಯ ಉಳಿಯಲಾರದು ಎಂಬುವುದನ್ನು ಸ್ಪಷ್ಟ ಪಡಿಸಿದೆ. ಅವಕಾಶ ಸಿಕ್ಕರೆ ಇವರು ಖಂಡಿತಾ ಜಿಲ್ಲೆಗೆ ಬೆಂಕಿ ಕೊಡ್ತಾರೆ ಎಂಬುವುದರಲ್ಲಿ ಸಂದೇಹವಿಲ್ಲ ಎಂದವರು ಹೇಳಿದರು.
ಸಚಿವ ರಮಾನಾಥ ರೈಯವರು ರಾಜೀನಾಮೆ ನೀಡಬೇಕು ಎಂದು ಹೇಳುವ ಇವರು ರೈಯವರ ಶುದ್ಧ ಚಾರಿತ್ರ್ಯದ ಒಂದಂಶವನ್ನಾದರೂ ತಮ್ಮಲ್ಲಿ ಉಳಿಸಿಕೊಂಡಿದ್ದಾರಾ ಎಂದು ಪ್ರಶ್ನಿಸಿದ ಅವರು ಜಿಲ್ಲೆಯಲ್ಲಿ ನಡೆದ ಕೆಲವು ಹತ್ಯೆಗಳನ್ನು ಇವರೇ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಸಂಸದರೊಬ್ಬರ ದುರಾಹಂಕಾರ, ದರ್ಪ, ಸಾರ್ವಜನಿಕವಾಗಿ ಇವರು ವರ್ತಿಸಿದ ರೀತಿಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದರು.
ಗೂಂಡಾ ಕಾಯಿದೆಯಡಿ ಕೇಸು ದಾಖಲು ಮಾಡಿ
ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಗೂಂಡಾ ಕಾಯಿದೆಯಡಿ ಕೇಸು ದಾಖಲಿಸಿ ಅವರಿಗೆ ಶಿಕ್ಷೆ ನೀಡಬೇಕು. ಯಾವುದೋ ಹೋರಾಟ ಮಾಡಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಇಂತವರಿಗೆ ಶಿಕ್ಷೆ ನೀಡದೇ ಇದ್ದರೆ ಸಾಮರಸ್ಯದ ಬದುಕು ಜಿಲ್ಲೆಯಲ್ಲಿ ಕಣ್ಮರೆಯಾಗುತ್ತದೆ. ಇವರ ಹೋರಾಟಕ್ಕೆ ಅಶೋಕ್‌ರ ಮಗನೂ ಬರೋದಿಲ್ಲ.. ಯಡಿಯೂರಪ್ಪನ ಮಗನೂ ಬರೋದಿಲ್ಲ. ಬರುವುದು ಶ್ರೀಸಾಮಾನ್ಯರು. ಈ ನಿರಪರಾಧಿಗಳು ಸತ್ತರೆ ಅದಕ್ಕೆ ರಾಜಕೀಯ ಬಣ್ಣ ಕಟ್ಟಿ ಲಾಭ ಮಾಡಿಕೊಳ್ಳುವುದಷ್ಟೇ ಇವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ, ನಗರಸಭಾ ಸದಸ್ಯ ಶಕ್ತಿಸಿನ್ಹಾ, ನಗರ ಕಾಂಗ್ರೇಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಹಾಗೂ ನಗರಸಭಾ ಸದಸ್ಯ ಅನ್ವರ್ ಖಾಸಿಂ ಉಪಸ್ಥಿತರಿದ್ದರು.
ಗೂಂಡಾಗಿರಿ ನಡೆಸುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸಿ
ಸಮಾಜಕ್ಕೆ ಕಂಟಕ ತರುವ ಯಾವುದೇ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆ. ಕೆಎಫ್‌ಡಿ, ಪಿಎಫ್‌ಐ, ಎಸ್‌ಟಿಪಿಐ ಮಾತ್ರವಲ್ಲ ಆರ್‌ಎಸ್‌ಎಸ್, ಬಜರಂಗದಳಗಳನ್ನೂ ನಿಷೇಧ ಮಾಡಲಿ. ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತಾಗುತ್ತದೆ. ಇದಕ್ಕೆ ಯಾವುದೇ ಆಕ್ಷೇಪಗಳಿಲ್ಲ. ಗೂಂಡಾಗಿರಿ ನಡೆಸುವ ಎಲ್ಲಾ ಸಂಘಟನೆಗಳೂ ನಿಷೇಧವಾಗಲಿ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ನಾನು ಪ್ರಬಲ ಆಕಾಂಕ್ಷಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿ ಎಂದ ಕಾವು ಹೇಮನಾಥ ಶೆಟ್ಟಿ ಈ ಹಿಂದೆ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಗೆ ಬಂದಾಗ ಒಂದು ಬಾರಿ ಮಾತ್ರ ನನಗೆ ಅವಕಾಶ ನೀಡಿ ಎಂದಿದ್ದರು. ಹಾಲಿ ಶಾಸಕರಿಗೆ ಟಿಕೇಟ್ ನೀಡುವುದನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಹೊಸ ಸಂಪ್ರದಾಯವನ್ನು ಕಾಂಗ್ರೆಸ್ ಮೊದಲ ಬಾರಿಗೆ ಅಳವಡಿಸಿಕೊಂಡಿದೆ. ಹಾಗಾಗಿ ಟಿಕೇಟಿಗಾಗಿ ಪ್ರಯತ್ನ ಪಡುತ್ತಿದ್ದೇನೆ. ಪಕ್ಷ ಹೇಳುವ ಯಾವುದಕ್ಕೂ ನಾನು ಬದ್ಧನಾಗಿದ್ದೇನೆ ಎಂದವರು ಹೇಳಿದರು.







