ವಿಮಾನ ಪ್ರಯಾಣದ ವೇಳೆ ಅಶಿಸ್ತು ತೋರಿದರೆ ಕಾದಿದೆ ‘ನಿಷೇಧ’ದ ಶಿಕ್ಷೆ !

ಹೊಸದಿಲ್ಲಿ, ಸೆ.8: ವಿಮಾನ ಪ್ರಯಾಣದ ಸಂದರ್ಭ ಪ್ರಯಾಣಿಕರು ತೋರುವ ಅಶಿಸ್ತಿನ ವರ್ತನೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿರುವ ಕೇಂದ್ರ ಸರಕಾರ, ಹಲ್ಲೆ ಸೇರಿದಂತೆ ಜೀವಬೆದರಿಕೆ ಒಡ್ಡುವಂತಹ ಅತ್ಯಂತ ಗಂಭೀರ ಪ್ರಮಾದ ಎಸಗುವ ಪ್ರಯಾಣಿಕರಿಗೆ ಎರಡು ವರ್ಷದ ವಿಮಾನ ಪ್ರಯಾಣ ನಿಷೇಧ ಹೇರಲು ನಿರ್ಧರಿಸಿದೆ.
ಮೂರನೇ ಹಂತದಲ್ಲಿ ಅತ್ಯಂತ ಕಠಿಣ ಶಿಕ್ಷೆಯಿದ್ದು, ವಿಮಾನದ ವ್ಯವಸ್ಥೆಗೆ ಹಾನಿ ಎಸಗುವ, ಜೀವ ಬೆದರಿಕೆ ಒಡ್ಡುವ ಮತ್ತು ಹಲ್ಲೆ ನಡೆಸುವ ಪ್ರಯಾಣಿಕರಿಗೆ ಈ ಶಿಕ್ಷೆ ನೀಡಲಾಗುತ್ತದೆ. 2ನೇ ಹಂತದಲ್ಲಿ ‘ದೈಹಿಕವಾಗಿ ನಿಂದಿಸುವ ವರ್ತನೆ(ತಳ್ಳುವುದು, ಒದೆಯುವುದು, ಅಸಭ್ಯ ರೀತಿಯಲ್ಲಿ ಸ್ಪರ್ಶಿಸುವುದು)ಯನ್ನು ಸೇರಿಸಲಾಗಿದೆ. ಈ ಅಪರಾಧಕ್ಕೆ ಆರು ತಿಂಗಳ ವಿಮಾನಪ್ರಯಾಣ ನಿಷೇಧ ಹೇರಲಾಗುತ್ತದೆ.
ಪುಂಡಾಟಿಕೆಯ ವರ್ತನೆ, ಅಸಭ್ಯವಾಗಿ ಬಯ್ಯುವುದು, ಮದ್ಯಪಾನ ಮಾಡಿ ಮನಸ್ಸಿಗೆ ಬಂದಂತೆ ವರ್ತಿಸುವುದು- ಇವೆಲ್ಲಾ 1ನೇ ಹಂತದ ಅಪರಾಧ ವಿಭಾಗದಲ್ಲಿ ಬರುತ್ತದೆ. ಇದರಲ್ಲಿ ಮೂರು ತಿಂಗಳ ಪ್ರಯಾಣ ನಿಷೇಧದ ಶಿಕ್ಷೆ ಇರುತ್ತದೆ.
ಗಂಭೀರ ಪ್ರಮಾದ ಎಸಗುವವರಿಗೆ ವಿಧಿಸಲಾಗುವ ಎರಡು ವರ್ಷದ ಶಿಕ್ಷೆಯ ಜೊತೆಗೆ, ಇತರ ಕಾನೂನು ಕ್ರಮಗಳನ್ನೂ ಕೈಗೊಳ್ಳಲು ಅವಕಾಶವಿದೆ ಎಂದು ವಿಮಾನಯಾನ ಇಲಾಖೆಯ ಸಚಿವ ಅಶೋಕ್ ಗಜಪತಿರಾಜು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಗೃಹ ಇಲಾಖೆ ಸೂಚಿಸುವ ವ್ಯಕ್ತಿಯನ್ನು ವಿಮಾನ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.
ಪ್ರಯಾಣಿಕರ ಸುರಕ್ಷೆ ಹಾಗೂ ಭದ್ರತೆ ನಮ್ಮ ಆದ್ಯತೆಯಾಗಿದ್ದು ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ ನಿಷೇಧ ಪಟ್ಟಿ ರೂಪಿಸಲಾಗಿದೆ. ಅಲ್ಲದೆ ವಿಮಾನದ ಸಿಬ್ಬಂದಿವರ್ಗ, ಪ್ರಯಾಣಿಕರು ಹಾಗೂ ವಿಮಾನದ ಭದ್ರತೆಯನ್ನು ಸರಿದೂಗಿಸಿಕೊಂಡು ಹೋಗಲು ಸರಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಇಲಾಖೆಯ ಸಹಾಯಕ ಸಚಿವ ಜಯಂತ್ ಸಿನ್ಹ ತಿಳಿಸಿದ್ದಾರೆ.







