ನಾಳೆ ಜಿಎಸ್‌ಟಿ ಮಂಡಳಿ ಸಭೆ
ತೆರಿಗೆ ವೈರುಧ್ಯಗಳ ನಿವಾರಣೆ,ಕಾರುಗಳ ಮೇಲೆ ಸೆಸ್ ಏರಿಕೆ ಪ್ರಮಾಣ ನಿಗದಿ ಸಾಧ್ಯತೆ

ಹೈದರಾಬಾದ್,ಸೆ.8: ಶನಿವಾರ ಇಲ್ಲಿ ಸಭೆ ಸೇರಲಿರುವ ಜಿಎಸ್‌ಟಿ ಮಂಡಳಿಯು ಹಲವಾರು ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆಗಳಲ್ಲಿನ ವೈರುಧ್ಯಗಳನ್ನು ನಿವಾರಿಸುವ ಜೊತೆಗೆ ಐಷಾರಾಮಿ ಮತ್ತು ಮಧ್ಯಮ ಗಾತ್ರದ ಕಾರುಗಳ ಮೇಲೆ ಸೆಸ್ ಏರಿಕೆಯ ಪ್ರಮಾಣವನ್ನು ನಿಗದಿಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ಇತ್ತೀಚಿಗೆ ತಾಂತ್ರಿಕ ತೊಂದರೆಗೊಳಗಾಗಿದ್ದ ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನೂ ಮಂಡಳಿಯು ಚರ್ಚಿಸಲಿದೆ.
ವಿತ್ತಸಚಿವ ಅರುಣ್ ಜೇಟ್ಲಿ ನೇತೃತ್ವದ, ರಾಜ್ಯ ಹಣಕಾಸು ಸಚಿವರನ್ನೊಳಗೊಂಡಿರುವ ಮಂಡಳಿಯು ಇಡ್ಲಿ/ದೋಸೆ ಹಿಟ್ಟು, ಒಣ ಹುಣಸೆಹಣ್ಣು, ಕಸ್ಟರ್ಡ್ ಪೌಡರ್ ಮತ್ತು ಕಿಚನ್ ಗ್ಯಾಸ್ ಲೈಟರ್ ಸೇರಿದಂತೆ ತೆರಿಗೆ ವೈರುಧ್ಯಗಳನ್ನು ಬೆಟ್ಟು ಮಾಡಲಾಗಿರುವ ಎರಡು ಡಝನ್‌ಗೂ ಅಧಿಕ ಉತ್ಪನ್ನಗಳ ಮೇಲಿನ ತೆರಿಗೆ ದರಗಳ ಇಳಿಕೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜುಲೈ 1ರಿಂದ ಜಿಎಸ್‌ಟಿ ಜಾರಿಗೊಂಡ ಬಳಿಕ ತೆರಿಗೆಯಿಂದ ಪಾರಾಗಲು ತಮ್ಮ ಬ್ರಾಂಡ್‌ಗಳ ನೋಂದಣಿಯನ್ನು ರದ್ದುಗೊಳಿಸುತ್ತಿರುವ ಉದ್ಯಮಗಳನ್ನು ನಿಭಾಯಿಸುವ ವ್ಯವಸ್ಥೆಯೊಂದನ್ನೂ ಮಂಡಳಿಯು ರೂಪಿಸಲಿದೆ.
ಬ್ರಾಂಡ್‌ರಹಿತ ಆಹಾರ ವಸ್ತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದ್ದರೆ, ಬ್ರಾಂಡೆಡ್ ಮತ್ತು ಪ್ಯಾಕೇಜ್ಡ್ ಆಹಾರ ವಸ್ತುಗಳ ಮೇಲೆ ಶೇ.5ರಷ್ಟು ತೆರಿಗೆಯನ್ನು ಹೇರಲಾಗಿದೆ.
ವಿವಿಧ ಕಾರುಗಳ ಮೇಲೆ ಸೆಸ್ ಏರಿಕೆ ಪ್ರಮಾಣವನ್ನೂ ಶನಿವಾರದ ಸಭೆಯು ನಿರ್ಧರಿಸಲಿದೆ.
ಆ.5ರಂದು ನಡೆದಿದ್ದ ತನ್ನ ಹಿಂದಿನ ಸಭೆಯಲ್ಲಿ ಮಂಡಳಿಯು ಮಧ್ಯಮ ಮತ್ತು ದೊಡ್ಡ ಗಾತ್ರದ ಕಾರುಗಳು, ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ಮೇಲಿನ ಸೆಸ್ ಅನ್ನು ಶೇ.15ರಿಂದ ಶೇ.25ರವರೆಗೆ ಹೆಚ್ಚಿಸಲು ಒಪ್ಪಿಗೆ ನೀಡಿತ್ತು. ಇದಕ್ಕಾಗಿ ಅಧ್ಯಾದೇಶವೊಂದನ್ನು ಹೊರಡಿಲಾಗಿದ್ದು, ಏರಿಕೆಯ ಪ್ರಮಾಣವನ್ನು ಮಂಡಳಿಯು ಈಗ ನಿರ್ಧರಿಸಲಿದೆ.
ವ್ಯಾಪಾರಿಗಳು ಮತ್ತು ಉದ್ಯಮಗಳ ವಿವಿಧ ಅಹವಾಲುಗಳನ್ನು ರಾಜ್ಯಗಳು ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಜಿಎಸ್‌ಟಿ ಜಾರಿಗೊಂಡ ಬಳಿಕ ಕಾರುಗಳ ಬೆಲೆಗಳು ಮೂರು ಲಕ್ಷ ರೂ.ವರೆಗೂ ಇಳಿಕೆಯಾಗಿದ್ದವು. ಈಗ ಕೆಲವು ವರ್ಗಗಳ ಕಾರುಗಳ ಮೇಲಿನ ಸೆಸ್ ಅನ್ನು ಶೇ.25ರ ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಜಿಎಸ್‌ಟಿಗೆ ಮುನ್ನ ಕಾರುಗಳ ಮೇಲೆ ಶೇ.52ರಿಂದ ಶೇ.54.72 ತೆರಿಗೆ ಮತ್ತು ಕೇಂದ್ರೀಯ ಮಾರಾಟ ತೆರಿಗೆ ಹಾಗೂ ಆಕ್ಟ್ರಾಯ್ ಎಂದು ಶೇ.2.5 ಹೆಚ್ಚುವರಿ ತೆರಿಗೆ ಬೀಳುತ್ತಿತ್ತು. ಜಿಎಸ್‌ಟಿ ಜಾರಿಯ ಬಳಿಕ ಕಾರುಗಳ ಮೇಲೆ ಒಟ್ಟೂ ತೆರಿಗೆ ಪ್ರಮಾಣ ಶೇ.43ಕ್ಕಿಳಿದಿದೆ.







