ಅಹೋರಾತ್ರಿ ಧರಣಿ ನಡೆಸಲು ಆಶಾ ಕಾರ್ಯಕರ್ತರ ನಿರ್ಧಾರ
6 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರಕಾರ ನಕಾರ

ಬೆಂಗಳೂರು, ಸೆ.8: ಮಾಸಿಕ ವೇತನ ನಿಗದಿ, ಆಶಾ ಸಾಫ್ಟ್ ರದ್ದತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಸಚಿವ ಆರೋಗ್ಯ ಸಚಿವ ರಮೇಶ್ ಕುಮಾರ್ ನಡುವೆ ನಡೆದ ಸಭೆ ವಿಫಲವಾಗಿದ್ದು, ಅಹೋರಾತ್ರಿ ಧರಣಿ ಮುಂದುವರೆಸಲು ಆಶಾಕಾರ್ಯಕರ್ತರು ನಿರ್ಧರಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತರು ಮುಂದಿಟ್ಟಿರುವ 6 ಸಾವಿರ ರೂ.ಮಾಸಿಕ ಪ್ರೋತ್ಸಾಹ ಧನದ ಬೇಡಿಕೆಯನ್ನು ಸರಕಾರ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಅಹೋರಾತ್ರಿ ಧರಣಿಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.
ಕಳೆದ ಎರಡು ದಿನದಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು 10ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಧರಣಿಯಲ್ಲಿ ನಿರತರಾಗಿದ್ದು, ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಅಸ್ವಸ್ಥರಾದ ಕಾರ್ಯಕರ್ತೆಯರು: ಕಳೆದ ಎರಡು ದಿನದಿಂದ ಮಳೆಯ ನಡುವೆಯೇ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತರಲ್ಲಿ ಕೆಲವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕ ನಾಯಕಿ ಲಕ್ಷ್ಮೀ ಎಡವಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಇದರ ನಡುವೆಯೇ ಧರಣಿಯ ನೇತೃತ್ವವನ್ನು ನಿಭಾಯಿಸುತ್ತಿದ್ದಾರೆ.
ಸಮಸ್ಯೆಗಳ ಮಹಾಪೂರ: ಕಳೆದ ಎರಡು ದಿನದಿಂದ ಸ್ವಾತಂತ್ರ ಉದ್ಯಾನವನದಲ್ಲಿಯೇ ಆಶಾ ಕಾರ್ಯಕರ್ತರು ಧರಣಿಯಲ್ಲಿ ನಿರತರಾಗಿರುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾರ್ಯಕರ್ತರಿಗೆ ರಾತ್ರಿ ಮಲಗಲು, ಆಹಾರ ಹಾಗೂ ಶೌಚಾಲಯ ವ್ಯವಸ್ಥೆ ಮಾಡಿದ್ದರೂ ಮಳೆಯ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಕಾರ್ಯಕರ್ತರ ಒತ್ತಾಯ: ಸರಕಾರ ನಮ್ಮ ಸಮಸ್ಯೆಗಳನ್ನು ಈಡೇರಿಸುತ್ತದೆ ಎಂಬ ಭರವಸೆಯ ಮೇಲೆ ದೂರದ ಊರುಗಳಿಂದ ಮನೆಗಳನ್ನು ಬಿಟ್ಟು ಬಂದಿದ್ದೇವೆ. ಇಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂದು ಆಶಾ ಕಾರ್ಯಕರ್ತರು ಒತ್ತಾಯಿಸಿದರು.







