ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲು ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಬಿ.ವಿ.ಸತ್ಯನಾರಾಯಣರಾವ್
ಬೆಂಗಳೂರು, ಸೆ.8: ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ತನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸದ ರಾಜ್ಯ ಸರಕಾರದ ವೈಖರಿ ವಿರುದ್ಧ ಸಾಹಿತಿ ಬಿ.ವಿ.ಸತ್ಯನಾರಾಯಣ ರಾವ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಾನು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ 2013ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಾನು ಅರ್ಜಿ ಸಲ್ಲಿಸಿದ್ದೆ. ಸರಕಾರ ತನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಿಲ್ಲ. ಇದರಿಂದ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದೆ. ಅದರಂತೆ ಹೈಕೋರ್ಟ್ 2015 ಮತ್ತು 2016ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರು ಪರಿಗಣಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಸರಕಾರ ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ಸತ್ಯನಾರಾಯಣ ರಾವ್ ದೂರಿದ್ದಾರೆ.
2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರು ಪರಿಗಣಿಸುವಂತೆ ಕೋರಿ ಆ.28ರಂದು ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿ ಶೀಘ್ರ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.





