ಮೋದಿ ವಿರುದ್ಧ ದಿಗ್ವಿಜಯ್‌ರಿಂದ ಅವಮಾನಕಾರಿ ಟ್ವೀಟ್

ಹೊಸದಿಲ್ಲಿ,ಸೆ.8: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಅವಮಾನಕಾರಿ ಟಿಪ್ಪಣಿ ಸಹಿತ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದು, ಮೋದಿ ಜನರನ್ನು ಮೂರ್ಖರನ್ನಾಗಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ ಎಂದು ಕುಟುಕಿದ್ದಾರೆ.
ಅವಮಾನಕಾರಿ ಚಿತ್ರದ ಜೊತೆಗೆ ‘‘ಇದು ನನ್ನದಲ್ಲ. ಆದರೆ ಪೋಸ್ಟ್ ಮಾಡದಿರಲು ಸಾಧ್ಯವಾಗಲಿಲ್ಲ. ಇದನ್ನು ಮೂಲತಃ ಪೋಸ್ಟ್ ಮಾಡಿದವರ ಕ್ಷಮೆ ಯಾಚಿಸುತ್ತೇನೆ. ಮೋದಿ ಮೂರ್ಖರನ್ನಾಗಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ’’ ಎಂಬ ಬರಹವನ್ನೂ ದಿಗ್ವಿಜಯ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಿಗೇ ಆಡಳಿತ ಪಕ್ಷದ ಸದಸ್ಯರು ಅವರ ವರುದ್ಧ ಮುಗಿಬಿದ್ದಿದ್ದಾರೆ.
ದಿಗ್ವಿಜಯ್ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಲಾಗುವುದೇ ಎನ್ನುವದು ಈವರೆಗೆ ಖಚಿತಪಟ್ಟಿಲ್ಲ. ಆದರೆ ಕಾಂಗ್ರೆಸ್ ತನ್ನ ನಾಯಕನ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿದೆ. ಯಾರೇ ಆದರೂ ಹೇಳಿಕೆಗಳನ್ನು ನೀಡುವಾಗ ಅಸಂಸದೀಯ ಭಾಷೆಯನ್ನು ಬಳಸಬಾರದು ಎಂದು ಕಾಂಗ್ರೆಸ್‌ನ ಪದಾಧಿಕಾರಿಯೋರ್ವರು ಹೇಳಿದರು.





