ಮಧ್ಯಂತರ ಜಾಮೀನು ಅರ್ಜಿ ವಜಾ: ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ
‘ವಾರ್ತಾಭಾರತಿ’ ವರದಿಗಾರನ ಬಂಧನ

ಮಂಗಳೂರು, ಸೆ.8: ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಖಲಂದರ್ ಎಂಬವನ ಮನೆಗೆ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ಕುರಿತಂತೆ ವರದಿ ಮಾಡಿದ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸರಿಂದ ಬಂಧಿತರಾಗಿರುವ ‘ವಾರ್ತಾಭಾರತಿ’ಯ ಬಂಟ್ವಾಳ ತಾಲೂಕಿನ ಮುಖ್ಯ ವರದಿಗಾರ ಇಮ್ತಿಯಾಝ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.
ಆರೋಪಿ ಖಲಂದರ್ ಮನೆಗೆ ಪೊಲೀಸರು ನಡೆಸಿದ ದಾಳಿಯ ಸಂದರ್ಭದಲ್ಲಿ ಪೊಲೀಸರು ಅಕ್ರಮ ಎಸಗಿದ್ದಾರೆ ಎಂದು ಕುಟುಂಬಸ್ಥರು ನೀಡಿರುವ ಹೇಳಿಕೆಗಳು ಸೆ.3ರ ‘ವಾರ್ತಾಭಾರತಿ’ ದೈನಿಕದಲ್ಲಿ ಪ್ರಕಟವಾಗಿತ್ತು. ಈ ವರದಿಗೆ ಸಂಬಂಧಿಸಿ ಪೊಲೀಸರು ಪತ್ರಿಕೆಯ ವರದಿಗಾರ ಮತ್ತು ಪತ್ರಿಕೆಯ ಮುಖ್ಯಸ್ಥರ ವಿರುದ್ಧ ಕಲಂ 153 (ಎ) ಮತ್ತು 505 (2) ಐಪಿಸಿಯಂತೆ ಪ್ರಕರಣ ದಾಖಲಿಸಿದ್ದರು.
ಸೆ.7ರಂದು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಪತ್ರಿಕೆಯ ವರದಿಗಾರ ಇಮ್ತಿಯಾಝ್ ಅವರನ್ನು ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದು ಬಂಧಿಸಿರುವ ಪೊಲೀಸರು ಸೆ.8ರಂದು ಮಧ್ಯಾಹ್ನದ ಬಳಿಕ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೆ, ‘‘ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಚಾರ ಸತ್ಯಕ್ಕೆ ದೂರವಾಗಿದ್ದು, ಪತ್ರಿಕೆಯಲ್ಲಿ ಕಾಣಿಸಿರುವ ಫೋಟೊ ಪೊಲೀಸರು ಮಹಜರು ಮಾಡಿ ಹೋದ ನಂತರ ಸೃಷ್ಟಿಸಿದ ಫೊಟೋಗಳಾಗಿರುತ್ತದೆ. ಇದು ಉದ್ದೇಶಪೂರ್ವಕವಾಗಿ ತನಿಖೆಯ ದಿಕ್ಕು ತಪ್ಪಿಸಲು, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಭಿನ್ನ ಸಮುದಾಯದ ಮಧ್ಯೆ ವಿಷಬೀಜ ಬಿತ್ತುವ ಕೃತ್ಯವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಅರ್ಜಿದಾರರು ಜಾಮೀನು ಹಾಗೂ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಅವರು ಅರ್ಜಿದಾರನ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಗೊಳಿಸಿ ಜಾಮೀನು ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿ ಆದೇಶ ನೀಡಿದ್ದಾರೆ.







