ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಿಟ್‌ನಿಂದ ತೀವ್ರಗೊಂಡ ತನಿಖೆ

ಬೆಂಗಳೂರು, ಸೆ.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಚಾರವಾದಿ, ಹಿರಿಯ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣಕ್ಕೂ, ಗೌರಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆಗಳಿವೆಯೇ ಎಂದು ತನಿಖೆ ನಡೆಯುತ್ತಿದ್ದು, ಗೌರಿ ಅವರ ಸಿದ್ಧಾಂತ ವಿರೋಧಿಗಳಿಂದ ಹತ್ಯೆ ನಡೆದಿರಬಹುದೇ ಎನ್ನುವ ಬಲವಾದ ಶಂಕೆ ವ್ಯಕ್ತವಾಗಿದೆ.
ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ಗಳ ಅಧ್ಯಯನ ನಡೆಸಿರುವ ಸಿಟ್ ಅಧಿಕಾರಿಗಳು, ಗೌರಿ ಲಂಕೇಶ್ ಪ್ರಕರಣಕ್ಕೆ ಸಾಮ್ಯತೆಗಳಿವೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಎರಡೂ ಪ್ರಕರಣಗಳಲ್ಲೂ ಹಂತಕರು ಮನೆಯ ಬಳಿಯೇ ಹತ್ಯೆ ನಡೆಸಿರುವುದು ಸ್ಪಷ್ಟವಾಗಿದೆ. ಸಂಚು ರೂಪಿಸಿ ಹತ್ಯೆಗೈದಿರುವ ಉದ್ದೇಶ ಏನು ಎಂಬುವುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೆ, ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ದೊರೆತ ಬೆರಳಚ್ಚು ವರದಿ ಮತ್ತು ಗೌರಿ ಹತ್ಯೆಯಲ್ಲಿ ದೊರೆತ ಹಂತಕರ ಬೆರಳಚ್ಚು ಮಾದರಿಯನ್ನು ವಿಧಿ ವಿಜ್ಞಾನಕ್ಕೆ ಕಳುಹಿಸಿ ಸಾಮ್ಯತೆಗಳಿವೆಯೇ ಎಂಬ ಬಗ್ಗೆ ತಾಳೆ ಹಾಕುತ್ತಿದ್ದಾರೆ.
ಪತ್ರಿಕಾ ವರದಿಗಳ ಬಗ್ಗೆ ಪರಿಶೀಲನೆ: ಆರು ತಿಂಗಳಿನಿಂದ ಗೌರಿ ಲಂಕೇಶ್ ಅವರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳನ್ನು ತನಿಖಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ತಮ್ಮ ಪತ್ರಿಕೆಯಲ್ಲಿ ಕೋಮುವಾದಿ, ಹಿಂದುತ್ವವಾದಿಗಳ ವಿರುದ್ಧ ಹೆಚ್ಚಾಗಿ ಗೌರಿ ಲಂಕೇಶ್ ಅವರು ಬರೆಯುತ್ತಿದ್ದರು. ಅವರ ಸಿದ್ಧಾಂತ ಒಪ್ಪದ ವ್ಯಕ್ತಿಗಳಿಂದಲೇ ಹತ್ಯೆ ನಡೆದಿದೆಯೇ ಎನ್ನುವ ಬಲವಾದ ಅನುಮಾನ ವ್ಯಕ್ತವಾಗುತ್ತಿದೆ.
ಆಪ್ತರಿಂದಲೂ ಅನುಮಾನ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಆಪ್ತರು, ಹೋರಾಟಗಾರರು, ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯದಂತೆ, ವಿಚಾರವಾದಿಗಳ ಸಿದ್ಧಾಂತ ವಿರೋಧಿಗಳಿಂದಲೇ ಈ ಹತ್ಯೆ ಮಾತ್ರವಲ್ಲ, ಡಾ.ಎಂ.ಎಂ.ಕಲಬುರ್ಗಿ ಹತ್ಯೆಯೂ ನಡೆದಿದೆ ಎಂದು ಹೇಳುತ್ತಾರೆ.
ನಿವಾಸಕ್ಕೆ ಎಫ್‌ಎಸ್‌ಎಲ್ ತಂಡ: ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) 10 ಅಧಿಕಾರಿಗಳ ತಂಡ ಶುಕ್ರವಾರ ಗೌರಿ ಲಂಕೇಶ್ ನಿವಾಸವನ್ನು ಪರಿಶೀಲನೆ ನಡೆಸಿದರು.
ಗುರುವಾರ ಸತತ 11 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದ ಈ ತಂಡ, ಶುಕ್ರವಾರ ಮುಂಜಾನೆಯಿಂದಲೇ ತನಿಖೆ ಚುರುಕುಗೊಳಿಸಿದೆ. ಇದುವರೆಗೆ ಎಫ್‌ಎಸ್‌ಎಲ್ ತಂಡಕ್ಕೆ ಒಟ್ಟು 14 ಗುಂಡುಗಳು ದೊರೆತಿದ್ದು, ಇದರ ವರದಿ ಬಂದ ಬಳಿಕ ಹಂತಕರು ಹತ್ಯೆಗೆ ಆಧುನಿಕ ಪಿಸ್ತೂಲ್ ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಕೇಬಲ್ ಆಪರೇಟರ್‌ಗಳನ್ನು ವಿಚಾರಣೆ ನಡೆಸುತ್ತಿರುವ ಸಿಟ್ ತಂಡ, ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಐಜಿ-ಡಿಜಿಪಿ ಆರ್.ಕೆ ದತ್ತಾ ಅವರು ದೊಡ್ಡ ಮಟ್ಟದಲ್ಲಿ ತನಿಖೆ ನಡೆಸುವಂತೆ ಈಗಾಗಲೇ ಸೂಚಿಸಿದ್ದಾರೆ. ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ತಂಡದವರು ಶುಕ್ರವಾರ ಸಂಜೆ ಸಭೆ ನಡೆಸಿದ್ದು, ಗುರುವಾರ ನಡೆದ ತನಿಖೆಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಚರ್ಚಿಸಲಾದ ಎಲ್ಲ ವಿಚಾರಗಳನ್ನು ಡಿಜಿಪಿ ಆರ್‌ಕೆ ದತ್ತಾ ಅವರ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೇಬಲ್ ಹುಡುಗರ ಮುಂದೆಯೇ ಆರೋಪಿ ಪರಾರಿ?
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ ನಡೆಸಿ ಆರೋಪಿ ತೆರಳುತ್ತಿರುವ ಹಾಗೂ ಕೇಬಲ್ ಹುಡುಗರ ಬೈಕ್ ಬರುತ್ತಿರುವ ದೃಶ್ಯ ಏಕಕಾಲದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಗೌರಿ ಲಂಕೇಶ್ ಮನೆ ಬಳಿ ಕೇಬಲ್ ಹುಡುಗರಾದ ರವಿ, ಮುಖೇಶ್ ಹಾಗೂ ಪ್ರಕಾಶ್ ಎಂಬುವರು ಬಂದಿದ್ದರು. ಈ ವೇಳೆ ಕೇಬಲ್ ಹುಡುಗರ ಎದುರಿಗೆ ಹಂತಕ ಬೈಕ್‌ನಲ್ಲಿ ತೆರಳುತ್ತಿರುವುದು ಸಿಸಿಟಿವಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.







