ಏರ್ ಇಂಡಿಯಾದ ಸಿಬ್ಬಂದಿಗಳನ್ನು ಅಮಾನತುಗೊಳಿಸಿದರೆ ಮುಷ್ಕರದ ಎಚ್ಚರಿಕೆ

ಹೊಸದಿಲ್ಲಿ,ಸೆ.8: ಮದ್ಯಸೇವನೆ ತಪಾಸಣೆಯನ್ನು ತಪ್ಪಿಸಿಕೊಂಡಿದ್ದಕ್ಕಾಗಿ ಏರ್ ಇಂಡಿಯಾದ 132 ಪೈಲಟ್‌ಗಳು ಮತ್ತು 430 ಕ್ಯಾಬಿನ್ ಸಿಬ್ಬಂದಿಗಳ ಪರವಾನಿಗೆಗಳನ್ನು ಅಮಾನತುಗೊಳಿಸುವುದಾಗಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಹಿಂದಿನ ಇಂಡಿಯನ್ ಏರ್‌ಲೈನ್ಸ್ ಪೈಲಟ್‌ಗಳ ಒಕ್ಕೂಟವಾಗಿರುವ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್(ಐಸಿಪಿಎ), ಯಾವುದೇ ಪೈಲಟ್ ವಿರುದ್ಧ ಕ್ರಮ ಜರುಗಿಸಿದರೆ ಡಿಜಿಸಿಎದ ಹಿರಿಯ ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ನಿಯಮಾವಳಿಗಳಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಉಲ್ಲಂಘನೆಯು ನಡೆದಿರುವುದರಿಂದ ಏರ್ ಇಂಡಿಯಾ ಅಥವಾ ಅದರ ಸಿಬ್ಬಂದಿಗಳ ತಪ್ಪಿಲ್ಲ ಎಂದು ಐಸಿಪಿಎ ಪ್ರತಿಪಾದಿಸಿದೆ.
ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ತಪ್ಪಿಲ್ಲದಿದ್ದರೂ ಅವರ ಪರವಾನಿಗೆಗಳನ್ನು ಅಮಾನತುಗೊಳಿಸಲು ಡಿಜಿಸಿಎ ಹುನ್ನಾರ ನಡೆಸಿದೆ. ಇದು ಡಿಜಿಸಿಎ ಅಧಿಕಾರಿಯಿಂದ ಪ್ರತೀಕಾರ ಸಾಧನೆಯ ಸ್ಪಷ್ಟ ಪ್ರಕರಣವಾಗಿದೆ. ಟ್ರಾನ್ಸಿಟ್ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ಸೌಲಭ್ಯವನ್ನು ಒದಗಿಸದಿರುವ ಹೊಣೆಯನ್ನು ಏರ್ ಇಂಡಿಯಾದ ಸಿಎಂಡಿ ವಹಿಸಿಕೊಂಡಿದ್ದರೂ ಡಿಜಿಸಿಎ ಹಂತಹಂತವಾಗಿ ಪೈಲಟ್‌ಗಳ ಪರವಾನಿಗೆಗಳನ್ನು ಅಮಾನತುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಐಸಿಪಿಎದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪ್ರವೀಣ ಕೀರ್ತಿ ಅವರು ಎಚ್ಚರಿಕೆ ಪತ್ರದಲ್ಲಿ ತಿಳಿಸಿದ್ದಾರೆ.







