ಮಡಿಕೇರಿ: ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆ

ಮಡಿಕೇರಿ, ಸೆ.8: ಲೋಕಾಯುಕ್ತ ನಿವೃತ್ತ ಡಿವೈಎಸ್ಪಿ ತನ್ನ ಬಂದೂಕಿನಿಂದ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರಗೋಡು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಡಿಕೇರಿ ಉಪವಿಭಾಗದ ಲೋಕಾಯುಕ್ತ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಸಿ.ಕೆ.ಶಶಿಧರ(64) ಆತ್ಮಹತ್ಯೆ ಮಾಡಿಕೊಂಡವರೆಂದು ತಿಳಿದು ಬಂದಿದೆ.
ಪತ್ನಿಯ ಅಗಲಿಕೆಯಿಂದ ಶಶಿಧರ್ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಪತ್ನಿ ಸಾವನ್ನಪ್ಪಿದ್ದರಿಂದ ತೀವ್ರವಾಗಿ ನೊಂದಿದ್ದ ಶಶಿಧರ್ ಅವರು, ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಸ್ನಾನದ ಕೊಠಡಿಯಲ್ಲಿ ಎದೆಯ ಭಾಗಕ್ಕೆ ಗುಂಡು ಹೊಡೆದುಕೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
Next Story





