ಜಿಎಸ್‍ಟಿಯಿಂದ ದೇಶದ ಆರ್ಥಿಕತೆಗೆ ಲಾಭ: ಸೋಮಶೇಖರ್

ತುಮಕೂರು, ಸೆ.8:ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಸೋಮಶೇಖರ್ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ, ಎಂಬಿಎ ವಿಭಾಗಗಳು ವಾಣಿಜ್ಯ ತೆರಿಗೆ ಇಲಾಖೆ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜಿಎಸ್‍ಟಿಯಿಂದ ಪರೋಕ್ಷ ತೆರಿಗೆ ವ್ಯವಸ್ಥೆಯ ಸಂಕೀರ್ಣತೆ ಕೊನೆಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ (ಪ್ರಭಾರ) ಪ್ರೊ.ಜಯಶೀಲ ಮಾತನಾಡಿ, ಭಾರತದಂತಹ ವೈವಿಧ್ಯತೆಯ ದೇಶದಲ್ಲಿ ಜಿಎಸ್‍ಟಿ ಅನುಷ್ಠಾನದ ಅನುಕೂಲಗಳನ್ನು ವಿವರಿಸಿ,ಜಿಎಸ್‍ಟಿ ವಿದೇಶಿ ಬಂಡವಾಳ ಹೂಡಿಕೆಗೆ ಸಹಕಾರಿಯಾಗಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೂ ಇದರಿಂದ ಬೆಂಬಲ ಸಿಗಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುಲ್ಬರ್ಗ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಎಸ್. ಬಸವರಾಜ್, ತುಮಕೂರು ವಿ.ವಿ. ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಚಿಯ್ಯ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನೀಲಕಂಠ ಎನ್. ಟಿ. ಉಪಸ್ಥಿತರಿದ್ದರು.





