ಪುತ್ತೂರು ವಿಧಾನಸಭಾ ಕ್ಷೇತ್ರ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ

ಮಹಮ್ಮದ್ ಬಡಗನ್ನೂರು - ಮುರಳೀಧರ ರೈ ಮಠಂತಬೆಟ್ಟು
ಪುತ್ತೂರು, ಸೆ. 8: ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಪುತ್ತೂರು ಬ್ಲಾಕ್ ಅಧ್ಯಕ್ಷರಾಗಿ ಮಹಮ್ಮದ್ ಬಡಗನ್ನೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿ ಮುರಳೀಧರ ರೈ ಮಠಂತಬೆಟ್ಟು ಆಯ್ಕೆಯಾಗಿದ್ದಾರೆ.
ಪುತ್ತೂರು ಬ್ಲಾಕ್ ಅಧ್ಯಕ್ಷರಾಗಿ ನ್ಯಾಯವಾದಿ ಫಝ್ಲುಲ್ ರಹೀಂ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿ ಪ್ರವೀಣ್ಚಂದ್ರ ಆಳ್ವ ಅವರು ಪ್ರಸ್ತುತ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಧಿಕಾರವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನೂತನವಾಗಿ ಮಹಮ್ಮದ್ ಬಡಗನ್ನೂರು ಮತ್ತು ಮುರಳೀಧರ ರೈ ಮಠಂತಬೆಟ್ಟು ಅವರನ್ನು ಅಧ್ಯಕ್ಷರನ್ನಾಗಿ ಪಕ್ಷವು ನೇಮಿಸಿದೆ. ಮಹಮ್ಮದ್ ಬಡಗನ್ನೂರು ಅವರು ಬಡಗನ್ನೂರು ಗ್ರಾ.ಪಂನಲ್ಲಿ 6 ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ 3 ತಿಂಗಳು ಉಪಾಧ್ಯಕ್ಷರಾಗಿ, ಕರ್ತವ್ಯ ನಿರ್ವಹಿಸಿದ್ದರು. ಒಂದು ಅವಧಿಗೆ ತಾ.ಪಂ. ಅಧ್ಯಕ್ಷರಾಗಿದ್ದ ಅವರು 2 ಅವಧಿಗೆ ಸದಸ್ಯರಾಗಿ ಚುನಾಯಿತರಾಗಿದ್ದರು. ಕಳೆದ 15 ವರ್ಷಗಳಿಂದ ಪಂಚಾಯತ್ರಾಜ್ ರಾಜ್ಯ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು ಅವರು ಕೋಡಿಂಬಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾಗಿದ್ದಾರೆ. ಬೆಳ್ಳಿಪ್ಪಾಡಿ-ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.





