ಕಬ್ಬಿಗೆ ಕೇಂದ್ರಕ್ಕಿಂತ ಹೆಚ್ಚು ದರ ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

ಮಂಡ್ಯ, ಸೆ.8: ಕೇಂದ್ರ ಸರಕಾರ ನಿಗದಿಪಡಿಸಿದ (ಎಫ್‍ಆರ್‍ಪಿ) ದರಕ್ಕಿಂತಲೂ ರಾಜ್ಯ ಸರಕಾರ ಕಬ್ಬಿಗೆ ಹೆಚ್ಚು ದರ ನಿಗದಿಪಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಗರದ ಸರಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಮಂಡ್ಯ ನಗರ ನೀರು ಸರಬರಾಜು ಯೋಜನೆ 3ನೆ ಹಂತ, ಒಳಚರಂಡಿ ವ್ಯವಸ್ಥೆ ಪುನರುಜ್ಜೀವನ ಹಾಗು ಉದ್ಯಾನವನ ಅಭಿವೃದ್ಧಿ ಯೋಜನೆಗಳಿಗೆ ರಿಮೋಟ್ ಒತ್ತುವ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸಕ್ಕರೆ ಬೆಲೆ ಕುಸಿತ, ಕಬ್ಬಿಗೆ ಕಡಿಮೆ ದರದಿಂದಾಗಿ ಕಳೆದ ವರ್ಷ ಕಡಿಮೆ ಕಬ್ಬು ಬೆಳೆಯಲಾಗಿದೆ. ಕೇಂದ್ರ ಸರಕಾರ ದರ ನಿಗದಿಪಡಿಸಲಿದ್ದು, ಈ ವರ್ಷ ರಾಜ್ಯ ಸರಕಾರ ಅದಕ್ಕಿಂತಲೂ ಹೆಚ್ಚು ದರ ನಿಗದಿಪಡಿಸಲಿದೆ. ಜಿಲ್ಲೆಯಲ್ಲಿ, ಮುಖ್ಯವಾಗಿ ಪಾಂಡವಪುರ ಭಾಗದ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ ತೀರಾ ಕಡಿಮೆಯಿದ್ದು, ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾಗುತ್ತಿದೆ. ಆದ್ದರಿಂದ ರೈತರು ಸರಾಸರಿ 9.5ಕ್ಕಿಂತಲೂ ಇಳುವಳಿ ಕಬ್ಬು ಬೆಳೆಯಬೇಕು ಎಂದೂ ಅವರು ಸಲಹೆ ಮಾಡಿದರು.
ರಾಜ್ಯದ 1.10 ಕೋಟಿ ಕುಟುಂಬದ 3.5 ಕೋಟಿ ಜನರು ಅನ್ನಭಾಗ್ಯ ಯೋಜನೆಯಿಂದ ಎರಡು ಹೊತ್ತು ಊಟ ಮಾಡುತ್ತಿದ್ದು, ಸದ್ಯದಲ್ಲೇ ಇನ್ನೂ 16 ಲಕ್ಷ ಕುಟುಂಬಗಳು ಅನ್ನಭಾಗ್ಯ ಯೋಜನೆಗೆ ಒಳಪಡಲಿದ್ದಾರೆ ಎಂದು ತಿಳಿಸಿದರು.
ದಿನಕ್ಕೆ ಸುಮಾರು 9018 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ಲೀಟರ್‍ವೊಂದಕ್ಕೆ ರಾಜ್ಯ ಸರಕಾರ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಅಂದರೆ, ದಿನವೊಂದಕ್ಕೆ ರಾಜ್ಯ ಸರಕಾರ 4 ಕೋಟಿ ರೂ.ಗಳನ್ನು ಹಾಲು ಉತ್ಪಾದಕ ರೈತರಿಗೆ ಕೊಡುತ್ತಿದೆ ಎಂದು ಅವರು ವಿವರಿಸಿದರು.
ಬ್ಯಾಂಕ್, ಸಹಕಾರ ಸಂಘಗಳಲ್ಲಿ ರೈತರು 52 ಸಾವಿರ ಕೋಟಿ ರೂ. ಸಾಲ ಪಡೆದಿದ್ದು, ಈ ಪೈಕಿ ರಾಜ್ಯ ಸರಕಾರ 8,165 ಕೋಟಿ ರೂ.ಗಳ ಸಹಕಾರ ಸಂಘಗಳ ಸಾಲಮನ್ನಾ ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ಸಾಲಮನ್ನಾ ಬೇರೆ ಯಾವ ಸರಕಾರದಲ್ಲೂ ಆಗಿಲ್ಲ ಎಂದು ಅವರು ನುಡಿದರು.
ಅನ್ನಭಾಗ್ಯ, ಕೃಷಿ ಭಾಗ್ಯ, ಶೂ ಭಾಗ್ಯ, ಮೈತ್ರಿ, ಮನಸ್ವಿನಿ ಸೇರಿದಂತೆ ರಾಜ್ಯ ಸರಕಾರ ಜಾರಿಗೊಳಿಸಿರುವ ರಾಜ್ಯದ ಆರೂವರೆ ಕೋಟಿ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲ ಮಾಡಿವೆ. ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಮಂಡ್ಯ ಬಗ್ಗೆ ವಿಶೇಷ ಪ್ರೀತಿ: ಮೈಸೂರಿನ ಭಾಗವಾಗಿದ್ದ ಮತ್ತು ನನ್ನ ವಿದ್ಯಾರ್ಥಿ ಜೀವನದ ಹೆಚ್ಚು ಸ್ನೇಹಿತರನ್ನು ಹೊಂದಿರುವ ಮಂಡ್ಯ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿ ಇದೆ. ಇದೊಂದು ರೀತಿಯ ಅಲಿಖಿತವಾದ ಬಾಂಧವ್ಯವಾಗಿದ್ದು, ಹಣಕಾಸು ಮಂತ್ರಿಯಿಂದ ಈವರೆಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಾನು ಜಿಲ್ಲೆಯನ್ನು ಕಡೆಗಣಿಸುತ್ತಿದ್ದೇನೆ ಎಂಬುವವರಿಗೆ ಪರೋಕ್ಷವಾಗಿ ಎದುರೇಟು ನೀಡಿದರು.
ಮೈಷುಗರ್ ಕಾರ್ಖಾನೆಗೆ 125 ಕೋಟಿ ರೂ,, ಪಾಂಡವಪುರ ಕಾರ್ಖಾನೆಗೆ 6.77 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಸುಮಾರು 2,200 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಆಧುನೀಕರಣವಾಗಿದೆ. ಜಿಲ್ಲೆಯ ಹೆಚ್ಚು ರೈತರ ಸಾಲಮನ್ನಾ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯ 1,16,434 ರೈತರ 429 ಕೋಟಿ ರೂ. ಸಾಲಮನ್ನಾವಾಗಿದೆ ಎಂದು ಅವರು ಮಂಡ್ಯಕ್ಕೆ ಸರಕಾರ ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಸತತ ನಾಲ್ಕು ವರ್ಷದ ಬರಗಾಲದಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಮನವಿ ಮಾಢಿದ ಅವರು, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದರು.
160 ಕೆರೆಗಳಿಗೆ ನೀರು: ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಜಿಲ್ಲೆಯ ಶೇ.90ರಷ್ಟು ಅಂದರೆ, 160 ಕೆರೆಗಳಿಗೆ ನೀರು ತುಂಬಲಾಗಿದ್ದು, ಹೇಮಾವತಿ ನಾಲಾ ವ್ಯಾಪ್ತಿಯ ಕೆರೆಗಳಿಗೂ ನೀರು ಬಿಡಲಾಗುತ್ತಿದೆ. ರಾಜ್ಯದಲ್ಲಿ ವಸತಿ ಯೋಜನೆಗಳಡಿ 12.5 ಲಕ್ಷ ಮನೆ ನಿಮಿಸಲಾಗಿದ್ದು, ಈ ವರ್ಷ 7.50 ಲಕ್ಷ ಮನೆ ನಿರ್ಮಿಸಲಾಗುವುದು ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ತಮಿಳುನಾಡಿಗೆ ಹರಿಸುವ ನೀರನ್ನು ಕಡಿಮೆ ಮಾಡಿ ಬೆಳೆಗಳಿಗೆ ನೀರು ಹರಿಸಬೇಕು. ಮಂಡ್ಯದ ಬೀಡಿ ಕಾರ್ಮಿಕರ ಬಡಾವಣೆ ಅಭಿವೃದ್ಧಿಪಡಿಸಬೇಕು. ಶಿಕ್ಷಕರ ಬೇಡಿಕೆ ಈಡೇರಿಸಬೇಕು ಎಂದು ಸಿಎಂ ಅವರಲ್ಲಿ ಒತ್ತಾಯಿಸಿದರು.
ಶಾಸಕ ಎನ್.ಚಲುವರಾಯಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯನ್ನು ಯಾವತ್ತೂ ಕಡೆಗಣಿಸಿಲ್ಲ. ಜಿಲ್ಲೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನುಡಿದಂತೆ ನಡೆದ ದೇಶದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಆಶ್ರಯ ಯೋಜನೆ ಸಾಲಮನ್ನಾ ಭಾಗ್ಯ ಪತ್ರ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಮತ್ತು ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಎಂ.ರೇವಣ್ಣ, ಎ.ಮಂಜು, ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಎಸ್.ಪಾಟೀಲ್, ಮಾಜಿ ಶಾಸಕ ಎಂ.ಎಸ್.ಆತ್ಮಾನಂದ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಡಿಸಿ ಎನ್.ಮಂಜುಶ್ರೀ, ಎಸ್ಪಿ ಜಿ.ರಾಧಿಕಾ, ಜಿಪಂ ಸಿಇಒ ಬಿ.ಶರತ್, ಇತರ ಗಣ್ಯರು ಉಪಸ್ಥಿತರಿದ್ದರು.







