ಕ್ಷೀರ ಭಾಗ್ಯದಿಂದ ಶಾಲಾ ದಾಖಲಾತಿ ಹೆಚ್ಚಳ: ಸಿಎಂ ಸಿದ್ದರಾಮಯ್ಯ
ಗೆಜ್ಜಲಗೆರೆಯಲ್ಲಿ ಮೆಗಾ ಡೇರಿಗೆ ಶಂಕುಸ್ಥಾಪನೆ

ಮದ್ದೂರು, ಸೆ.8: ಕ್ಷೀರ ಭಾಗ್ಯ ಯೋಜನೆಯಡಿ 1 ಕೋಟಿ 3 ಲಕ್ಷ ಸರಕಾರಿ, ಅಂಗನವಾಡಿ ಹಾಗು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲನ್ನು ನೀಡಲಾಗುತ್ತಿದ್ದು, ಇದರಿಂದ ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲು ಸಹಕಾರಿಯಾಗಿದ್ದು, ಶಾಲಾ ದಾಖಲಾತಿ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಗೆಜ್ಜಲಗೆರೆ ಮನ್‍ಮುಲ್ ಡೇರಿ ಆವರಣದಲ್ಲಿ ಸುಮಾರು 227 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ದಿನವಹಿ 12 ಲಕ್ಷ ಲೀಟರ್ ಮೆಗಾ ಡೇರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕ್ಷೀರಭಾಗ್ಯ ಮತ್ತು ಅನ್ನಭಾಗ್ಯ ಯೋಜನೆಗಳು ಶಾಲಾ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿವೆ ಎಂದರು.
ಹೈನುಗಾರಿಕೆಯಲ್ಲಿ ರಾಜ್ಯ ದೇಶಕ್ಕೆ ಎರಡನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು. ಮಂಡ್ಯ ಜಿಲ್ಲೆಯಲ್ಲಿ 9 ಲಕ್ಷದ 18 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 5 ರೂ. ಪ್ರೋತ್ಸಾಹ ಧನದಿಮದ ಸುಮಾರು 10 ಲಕ್ಷ ರೈತ ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸಿದೆ ಎಂದು ಅವರು ಹೇಳಿದರು.
ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಯುವಕರಿಗೆ ಹೈನುಗಾರಿಕೆ ಮೂಲಕ ಸ್ವಯಂ ಉದ್ಯೋಗ ಸಿಕ್ಕಿದ್ದು, ಇದರಿಂದ ನಗರಕ್ಕೆ ವಲಸೆ ಹೋಗುವುದು ನಿಯಂತ್ರಣವಾಗಿದೆ ಮತ್ತು ಗ್ರಾಮಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‍ಮುಲ್) ಕಳೆದ 5 ವರ್ಷದಿಂದ ಲಾಭದಲ್ಲಿದೆ. ಮೆಗಾ ಡೇರಿ ಉದ್ಘಾಟನೆಯಗುವ ಮೂಲಕ ಒಕ್ಕೂಟಕ್ಕೆ ಬರುತ್ತಿರುವ ಹಾಲು ಸರಬರಾಜಿನ ಸಂರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ರೈತರು ಕೃಷಿ ಜತೆಜತೆಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇನ್ನಿತರರ ಉಪ ಕಸುಬುಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಸಿದ್ದರಾಮಯ್ಯ ಕರೆ ನೀಡಿದರು.
ಹೈನುಗಾರಿಕೆ ಪ್ರೋತ್ಸಾಹಿಸುವ ನೀಡುವ ಉದ್ದೇಶದಿಂದ ವರ್ಷಕ್ಕೆ 1,206 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಸಚಿವ ಸಂಪುಟದಲ್ಲಿ ಸಹಕಾರ ಸಚಿವನಾಗಿದ್ದ ವೇಳೆ ಪ್ರತ್ಯೇಕವಾಗಿದ್ದ ಸಹಕಾರ ಸಂಘಗಳನ್ನು ಜಿಲ್ಲಾ ಒಕ್ಕೂಟದಲ್ಲಿ ಮಿಲನ ಮಾಡಿದ್ದು ನಾನು ಎಂದು ಅವರು ಸ್ಮರಿಸಿದರು.
ಪಶುಸಂಗೋಪನಾ ಇಲಾಖೆಯ ಸಚಿವ ಎಂ.ಮಂಜು ಮಾತನಾಡಿ, ರೈತರಿಗೆ ಹೈನುಗಾರಿಕೆ ಸಂಜೀವನಿನಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಪ್ರೋತ್ಸಾಹ ಧನ 4 ವರ್ಷಗಳಿಂದ ನೀಡಿಲ್ಲ, ಈ ಸಂಬಂಧ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ನರೇಂದ್ರಸ್ವಾಮಿ, ರಮೇಶ್‍ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕಲ್ಪನಾಸಿದ್ದರಾಜು, ಮಧುಜಿ.ಮಾದೇಗೌಡ, ಡಾ.ಮಹೇಶ್‍ಚಂದ್, ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಮನ್‍ಮುಲ್ ಅಧ್ಯಕ್ಷ ಅಧ್ಯಕ್ಷ ಕದಲೂರು ರಾಮಕೃಷ್ಣ, ನಿರ್ದೇಶಕರು ಇತರರು ಉಪಸ್ಥಿತರಿದ್ದರು.







