ಕಾಂಗ್ರೆಸ್ ಮುಖಂಡರು ಜನರಿಗೆ ವಿವರಣೆ ನೀಡಬೇಕಾಗಿದೆ: ಬಿ.ಎಂ. ಫಾರೂಕ್
ವಾರ್ತಾಭಾರತಿ ವರದಿಗಾರನ ಬಂಧನ

ಬೆಂಗಳೂರು, ಸೆ. 8: ದೇಶದಲ್ಲಿ ಅಸಹಿಷ್ಣುತೆ ಇದೆ, ಅಭಿವ್ಯಕ್ತಿ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಆದರೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೇ ಈಗ ಪತ್ರಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ಇಲ್ಲದಂತಾಗಿದೆ ಎಂದು ಜಿಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಹೇಳಿದ್ದಾರೆ.
ಪತ್ರಿಕೆಯಲ್ಲಿ ವರದಿ ಮಾಡಿದ್ದನ್ನೇ ಅಪರಾಧ ಎಂದು ಪ್ರಕರಣ ದಾಖಲಿಸುವುದು, ನೋಟಿಸ್ ನೀಡದೆಯೇ ಇದ್ದಕ್ಕಿದಂತೆ ಸಿಕ್ಕಿದಲ್ಲಿಂದ ಎತ್ತಿಕೊಂಡು ಹೋಗಿ ಬಂಧಿಸುವುದು, ಪತ್ರಕರ್ತನನ್ನು ಒಬ್ಬ ಕ್ರಿಮಿನಲ್ ನಂತೆ ನಡೆಸಿಕೊಳ್ಳುವುದು ಇವೆಲ್ಲಾ ಅಪಾಯಕಾರಿ ಬೆಳವಣಿಗೆಗಳು. ಕಾಂಗ್ರೆಸ್ ಮೂಗಿನಡಿಯಲ್ಲೇ ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಕಾಂಗ್ರೆಸ್ ಅಧ್ಯಕ್ಷರು ನಾಡಿನ ಜನರಿಗೆ ವಿವರಣೆ ನೀಡಬೇಕಾಗಿದೆ ಎಂದು ತಿಳಿಸಿದರು.
ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಲು ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಒಂದೆಡೆ ವಿಚಾರವಾದಿಗಳ ಹತ್ಯೆ ನಡೆಯುತ್ತಿದೆ. ಇನ್ನೊಂದೆಡೆ ಪೊಲೀಸರಿಂದ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪತ್ರಕರ್ತನ ಕರ್ತವ್ಯಕ್ಕೆ ಅಡ್ಡಿಪಡಿಸುವ ಪೊಲೀಸರ ಈ ಕ್ರಮ ಖಂಡನೀಯ ಎಂದು ಬಿ.ಎಂ. ಫಾರೂಕ್ ಹೇಳಿದರು.





