ಪುಷ್ಕರ್ ಸಾವಿನ ಸುದ್ದಿ ಪ್ರಸಾರ ನಿರ್ಬಂಧಿಸಲು ದಿಲ್ಲಿ ಉಚ್ಚ ನ್ಯಾಯಾಲಯ ನಕಾರ

ಹೊಸದಿಲ್ಲಿ, ಸೆ. 8: ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ಹಾಗೂ ಚರ್ಚೆಯ ಪ್ರಸಾರ ನಿರ್ಬಂಧಿಸಲು ಟಿ.ವಿ. ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಅವರ ಸುದ್ದಿ ವಾಹಿನಿ ರಿಪಬ್ಲಿಕ್ ಟಿ.ವಿ.ಗೆ ಯಾವುದೇ ಮಧ್ಯಂತರ ಆದೇಶ ಜಾರಿ ಮಾಡುವುದನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಡೆ ಹಿಡಿದಿದೆ.
ಪುಷ್ಕರ್ ಸಾವಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪದ ಅಂಶವನ್ನು ತಪ್ಪಾಗಿ ವರದಿ ಮಾಡಲಾಗಿದ್ದು, ಅದರ ಪ್ರಸಾರ ಪ್ರತಿಬಂಧಿಸುವಂತೆ ಕೋರಿ ತರೂರ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಗೋಸ್ವಾಮಿ ಹಾಗೂ ಸುದ್ದಿ ವಾಹಿನಿಗೆ ನೊಟೀಸು ಜಾರಿ ಮಾಡಿರುವ ನ್ಯಾಯಮೂರ್ತಿ ಮನಮೋಹನ್ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದ್ದಾರೆ. ಈ ವಿಷಯದ ಕುರಿತು ವಿವರವಾದ ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಅದರ ಬಳಿಕ ಮಾತ್ರವೇ ಆದೇಶ ಮಂಜೂರು ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಯ ಮೊದಲ ದಿನಾಂಕದ ಬಳಿಕ ಅವರು ನಿಮ್ಮನ್ನು ‘ಕೊಲೆಗಾರ’ ಎಂದು ಕರೆದಿರುವುದಕ್ಕೆ ಪುರಾವೆ ತೋರಿಸಿ. ಸುದ್ದಿ ವಾಹಿನಿಯ ಸಂಪಾದಕೀಯ ನೀತಿಯನ್ನು ನನಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದ್ದಾರೆ.





