ಜಿಲ್ಲೆಯಲ್ಲಿ 8 ಕ್ಲಬ್ ಶಿಕ್ಷಣ ಸಂಸ್ಥೆ ಮೂಲಕ ವಿದ್ಯಾದಾನದಲ್ಲಿ ಸಕ್ರೀಯವಾಗಿದೆ: ಎ.ಆರ್ ಉಜನಪ್ಪ

ಶಿಕಾರಿಪುರ, ಸೆ.8: ಸೇವಾ ಕಾರ್ಯದಿಂದಾಗಿ ಯುನೈಟೆಡ್ ನೇಷನ್ ಆರ್ಗನೈಝೇಷನ್ ವತಿಯಿಂದ ವಿಶೇಷ ಸದಸ್ಯತ್ವ ಪಡೆದ ಏಕೈಕ ಸಂಸ್ಥೆಯಾಗಿ ಲಯನ್ಸ್ ಕ್ಲಬ್ ಗುರುತಿಸಿಕೊಂಡಿದೆ ಎಂದು ಲಯನ್ಸ್ ಕ್ಲಬ್ 317 ಸಿ ಜಿಲ್ಲಾ ಗವರ್ನರ್ ಎ.ಆರ್ ಉಜನಪ್ಪ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಒಳಗೊಂಡ 317 ಸಿ ಲಯನ್ಸ್ ಜಿಲ್ಲೆ 78 ಕ್ಲಬ್ ಹೊಂದಿದ್ದು 1917 ರಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ 210 ರಾಷ್ಟ್ರದಲ್ಲಿ 46680 ಕ್ಲಬ್ ಗಳನ್ನು ಹೊಂದಿ 14.5 ಲಕ್ಷ ಸದಸ್ಯರ ಬಹು ದೊಡ್ಡ ಸೇವಾ ಸಂಸ್ಥೆಯಾಗಿ ಪ್ರಸಿದ್ದವಾಗಿದೆ ಎಂದು ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆ ಮಾದರಿಯಲ್ಲಿ ಪಾರದರ್ಶತಕತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಹೊಸಪೀಳಿಗೆಗೆ ಅವಕಾಶ ಕಲ್ಪಿಸುವ ದಿಸೆಯಲ್ಲಿ ಅಧ್ಯಕ್ಷರ ಅವಧಿಯನ್ನು ವರ್ಷಕ್ಕೆ ಸೀಮಿತವಾಗಿಸಲಾಗಿದೆ. ಜಿಲ್ಲೆಯಲ್ಲಿ 8 ಕ್ಲಬ್ ಶಿಕ್ಷಣ ಸಂಸ್ಥೆ ಮೂಲಕ ವಿದ್ಯಾದಾನದಲ್ಲಿ ಸಕ್ರೀಯವಾಗಿದ್ದು ಶಿಕಾರಿಪುರದ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಸಾಧನೆಯಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸೇವೆ ಲಯನ್ಸ್ ಕ್ಲಬ್ ಮುಖ್ಯ ಧ್ಯೇಯವಾಗಿದ್ದು, ಮನುಷ್ಯನ ಅಂಗಾಂಗಳಲ್ಲಿ ಪ್ರಮುಖವಾದ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದ ಅವರು, ಬ್ರಹ್ಮಾವರ-ಬಾರ್ಕೂರು ಕ್ಲಬ್ ಹಾಗೂ ಹಿರಿಯೂರು ಕ್ಲಬ್ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿನ ಕಣ್ಣಿನ ಆಸ್ಪತ್ರೆ ಈ ದಿಸೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ವಸಂತಕುಮಾರ್ ಮಾತನಾಡಿ, ದೊರೆತ ಅವಧಿಯಲ್ಲಿ ಬನಸಿರಿ ಶಿಕ್ಷಣ ಸಂಸ್ಥೆಯಲ್ಲಿ 1.26 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, 8 ಲಕ್ಷ ವೆಚ್ಚದಲ್ಲಿ ವಿವಿಧ ಕೊಠಡಿಯ ನೆಲ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ 150 ಟೇಬಲ್,15 ಕಂಪ್ಯೂಟರ್ ವಿತರಣೆಯ ಗುರಿ ಹೊಂದಲಾಗಿದ್ದು, ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿಗೆ ಉಚಿತ ಪುಸ್ತಕ,5 ಟೇಬಲ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ರುದ್ರೇಗೌಡ,ಶಿಕಾರಿಪುರ ಕ್ಲಬ್ ಸ್ಥಾಪಕ ಸದಸ್ಯ ಡಾ.ದಯಾನಂದ್, ಜಯಣ್ಣ ಹಂಚಿನಮನೆ, ಕಾರ್ಯದರ್ಶಿ ಬಾಲಚಂದ್ರ, ಡಿ.ಕೆ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.







