ರೈತರು ಅಣು ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಅಳವಡಿಸಿದರೆ ಆರ್ಥಿಕ ಸುಧಾರಣೆ ಹೊಂದಬಹುದು: ವಿಜ್ಞಾನಿ ಡಾ.ಟಿ.ಆರ್ ಗಣಪತಿ

ಚಿಕ್ಕಬಳ್ಳಾಪುರ, ಸೆ.8: ಅಣು ತಂತ್ರಜ್ಞಾನವನ್ನು ರೈತರು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿಯೊಂದಿಗೆ, ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳಬಹುದು ಎಂದು ವಿಜ್ಞಾನಿ ಡಾ.ಟಿ.ಆರ್ ಗಣಪತಿ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಎಸ್‍ಜೆಸಿಐಟಿ ತಾಂತ್ರಿಕ ಕಾಲೇಜು ಕಾಮಗಾರಿ ವಿಭಾಗದ ಸೆಮಿನಾರ್ ಹಾಲ್‍ನಲ್ಲಿ ಏರ್ಪಡಿಸಿದ್ದ ಅಂಗಾಂಗ ಕೃಷಿ ತ್ಯಾಜ್ಯ ನಿರ್ವಹಣೆ ಹಾಗೂ ಸಸ್ಯ ವೈವಿಧ್ಯ-ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಶೋಧನಾ ಕೇಂದ್ರವಲ್ಲಿ ರೋಗಮುಕ್ತ ಗುಣಮಟ್ಟದ ಸಸಿಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಸಸಿಗಳನ್ನು ಪಡೆಯುವುದರಿಂದ ಅಧಿಕ ಇಳುವರಿ ಪಡೆಯಬಹುದು ಎಂದರು.
ಒಂದು ಹೊಸ ತಳಿಯನ್ನು ಅಭಿವೃದ್ಧಿ ಪಡಿಸಬೇಕಾದರೆ ಹಲವಾರು ವರ್ಷಗಳ ಪ್ರಯತ್ನ ಬೇಕಾಗುತ್ತದೆ. ರೋಗ ಪತ್ತೆಯಾದಾಗಲೂ ತಪಾಸಣೆ ನಡೆಸಲು ಒಂದರಿಂದ ಒಂದುವರೆ ವರ್ಷಹಿಡಿಯುತ್ತದೆ. ಹೀಗಾಗಿ ಯಾವುದೇ ವಿಜ್ಞಾನಿ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಶ್ರಮವವಹಿಸಿ ದುಡಿಯುತ್ತಿರುತ್ತಾರೆ. ಉದ್ದೇವೇನೆಂದರೆ ರೋಗ ಮುಕ್ತ ಪೋಷಕಾಂಶಯುಕ್ತ ಆರೋಗ್ಯವಂತ ಸಸಿಗಳ ಶೋಧನೆಯಾಗಿದೆ. ಈ ಬಗ್ಗೆ ರೈತರು ತಿಳಿಯುವುದು ಒಳಿತು ಎಂದರು.
ವಿಜ್ಞಾನಿ ಡಾ. ಆನಂದ ಎಂ. ಬಡಿಗಣ್ಣನವರ್ ಮಾತನಾಡಿ, ಸುಧಾರಿತ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ರೈತರು ಹೆಚ್ಚಿನ ಇಳುವರಿಯೊಂದಿಗೆ ಅಧಿಕ ಲಾಭಗಳಿಸಬೇಕಾದರೆ ನಾನು ಯಾವ ಬೆಳೆಯನ್ನು ಎಂತಹ ಮಣ್ಣಿನಲ್ಲಿ ಬೆಳೆಯುತ್ತಿದ್ದೇನೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಸಂಬಂಧಪಟ್ವರಿಂದ ಪಡೆಯುವುದು ಅಗತ್ಯ ಎಂದರು.
ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ನೂತನವಾಗಿ ಸಂಶೋಧಿಸಿರುವ ಅಂಗಾಂಗ ಕಸಿಯ ತಳಿಗಳನ್ನು ಬೆಳೆಯಲು ಮುಂದಾಗಬೇಕು. ಅಂಗಾಂಗ ಕಸಿಯ ತಳಿಗಳಲ್ಲಿ 50 ವರ್ಷ ತಾಳಿಕೆಯ ರೋಗ ನಿರೋಧಕ ಶಕ್ತಿ ಇದೆ. ಇವುಗಳಿಂದ ದೇಶದ ಪ್ರಗತಿಪರ ರೈತರು ಒಂದು ಎಕರೆಯಲ್ಲಿ ಹದಿನೈದರಿಂದ 35 ಕ್ವಿಂಟಾಲ್ ಫಸಲು ಪಡೆದಿದ್ದಾರೆ. ಆಂದ್ರ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಹೊಸತಳಿಗಳಿಂದ ಈ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ವಿಜ್ಞಾನಿ ಡಾ.ಎಸ್. ಘೋಷ್ ಮಾತನಾಡಿ, ಕಸವಾಗಿ ನೈರ್ಮಲ್ಯ ಹಾಳು ಮಾಡುವ ಆಹಾರದ ತ್ಯಾಜ್ಯ ಬಳಸಿ ಮನೆಗೆ ಬೇಕಾದ ವಿದ್ಯುತ್ ಮತ್ತು ಅಡುಗೆ ಅನಿಲವನ್ನು ಹೇಗೆ ಇದ್ದಲ್ಲಿಯೇ ತಯಾರಿಸಬಹುದೆಂಬುದನ್ನು ಎಸ್ ಜೆಸಿಐಟಿ ಬಾಲಕರ ವಸತಿನಿಲಯದಲ್ಲಿ ಅಳವಡಿಸಲಾಗಿರುವ ಘಟಕವನ್ನು ಪ್ರಾಯೋಗಿಕವಾಗಿ ತೋರಿಸಿ ರೈತರರಿಗೆ ಅದರ ಬಳಕೆ ಮತ್ತು ಸ್ಥಾಪನೆಯ ಬಗ್ಗೆ ವಿವರಿಸಿದರು.
ಚಿಂತಾಮಣಿ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪಾಪಿರೆಡ್ಡಿ ಮಾತನಾಡಿ, ರೈತರು ಬೀಜ ಮತ್ತು ಸಸಿಗಳನ್ನು ಖರೀದಿ ಮಾಡುವಾಗ ತಪ್ಪದೆ ರಸೀತಿ ಪಡೆಯಿರಿ ಆಗ ನಷ್ಟಪರಿಹಾರ ಪಡೆಯಲು ಸಾಧ್ಯ. ಯಾವುದೇ ಬೆಳೆಯಾಗಲಿ ಜೀನ್ಸ್ ಶಕ್ತಿ, ಭೂಮಿಯ ಗುಣ ಮತ್ತು ಹವಾಗುಣವನ್ನವಲಂಭಿಸಿ ಬೆಳೆಯುತ್ತದೆ.ಹಾಗಾಗಿ ಉತ್ತಮ ತಳಿ ಭೂಮಿ ಅರೈಕೆಯಿದ್ದರೆ ಕೃಷಿ ಲಾಭದಾಯಕವಾಗಿರುತ್ತದೆ ಎಂದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರಘು ಇಲಾಖೆ ಕೈಗೊಂಡಿರುವ ಕ್ರಮಗಳು ಮತ್ತು ಕೃಷಿಹೊಂಡ ಹನಿ ನೀರಾವರಿ, ಅಣಬೆ ಕೃಷಿ, ಮಹತ್ವಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು. ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ ಪ್ರಾಂಶುಪಾಲ ಡಾ. ರವಿಕುಮಾರ್, ರೈತ ಮುಖಂಡ ಆನೂರು ದೇವರಾಜ್, ಯಲುವಳ್ಳಿ ಸೊಣ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.







