ಮಹಾರಾಷ್ಟ್ರ: ಆಗಸ್ಟ್‌ನಲ್ಲಿ 55 ಶಿಶುಗಳು ಮೃತ್ಯು

ಮುಂಬೈ, ಸೆ. 8: ನಾಸಿಕ್‌ನ ಸಿವಿಲ್ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ನಿಗಾ ಘಟಕದಲ್ಲಿ ಕಳೆದ ತಿಂಗಳು 55ಕ್ಕಿಂತಲೂ ಅಧಿಕ ಶಿಶುಗಳು ಮೃತಪಟ್ಟಿವೆ. ಆದರೆ, ವೈದ್ಯಕೀಯ ನಿರ್ಲಕ್ಷ್ಯದಿಂದ ಶಿಶುಗಳು ಸಾವನ್ನಪ್ಪಿರುವುದಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎಪ್ರಿಲ್‌ನಿಂದ 187 ಶಿಶುಗಳು ಸಾವನ್ನಪ್ಪಿವೆ. ಆಗಸ್ಟ್‌ನಲ್ಲಿ 55 ಮಕ್ಕಳು ಸಾವನ್ನಪ್ಪಿವೆ ಎಂದು ನಾಸಿಕ್‌ನ ಸಿವಿಲ್ ಸರ್ಜನ್ ಸುರೇಶ್ ಜಗ್ದಾಲೆ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಬದುಕುವ ಸಾಧ್ಯತೆ ಕಡಿಮೆ ಇದ್ದಾಗ ಇಲ್ಲಿಗೆ ತಂದ ಹೆಚ್ಚಿನ ಶಿಶುಗಳು ಸಾವನ್ನಪ್ಪಿವೆ. ಅವಧಿಪೂರ್ವ ಜನನ ಹಾಗೂ ಶ್ವಾಸಕೋಶದ ದುರ್ಬಲತೆಯಿಂದ ಕೂಡಾ ಶಿಶುಗಳು ಸಾವನ್ನಪ್ಪಿವೆ ಎಂದು ಜಗ್ದಾಲೆ ತಿಳಿಸಿದ್ದಾರೆ.
ಯಾವುದೇ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಉಂಟಾಗಿಲ್ಲ. ಆಸ್ಪತ್ರೆಯಲ್ಲಿ 18 ಇನ್‌ಕ್ಯೂಬೇಟರ್‌ಗಳಿವೆ ನಾವು ಎರಡನ್ನೂ ಇರಿಸಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಇತರ ಇನ್‌ಕ್ಯೂಬೇಟರ್‌ಗಳನ್ನು ಬಳಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕೊನೆಯ ಹಂತದಲ್ಲಿ ಶಿಶುಗಳನ್ನು ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸುತ್ತಿರುವುದು ಸತ್ಯ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ದೀಪಕ್ ಸಾವಂತ್ ಹೇಳಿದ್ದಾರೆ.





