ಭಾರತದ ಪುರುಷರ ಹಾಕಿ ನೂತನ ಕೋಚ್ ಆಗಿ ಮಾರಿಜಿನ್ ಆಯ್ಕೆ
ಹರೇಂದ್ರ ಸಿಂಗ್ ಮಹಿಳಾ ತಂಡದ ಉನ್ನತ ಪ್ರದರ್ಶನದ ವಿಶೇಷ ಕೋಚ್

ಹೊಸದಿಲ್ಲಿ, ಸೆ.8: ಭಾರತದ ಪುರುಷರ ತಂಡದ ನೂತನ ಮುಖ್ಯ ಕೋಚ್ ಆಗಿ ಹಾಲೆಂಡ್‌ನ ಜೊಯೆರ್ಡ್ ಮಾರಿಜಿನ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ. ನೂತನ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪ್ರಸ್ತುತ ಮಹಿಳಾ ರಾಷ್ಟ್ರೀಯ ತಂಡದ ಕೋಚ್ ಆಗಿರುವ ಜೊಯೆರ್ಡ್‌ಗೆ ಸೀನಿಯರ್ ಪುರುಷರ ತಂಡಕ್ಕೆ ಕೋಚಿಂಗ್ ನೀಡಿರುವ ಯಾವುದೇ ಅನುಭವವಿಲ್ಲ. ಈ ಹಿನ್ನೆಲೆಯಲ್ಲಿ ಜೊಯೆರ್ಡ್ ಆಯ್ಕೆ ಅಚ್ಚರಿ ಮೂಡಿಸಿದೆ.
ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ ಕೋಚ್ ಹುದ್ದೆಯಿಂದ ಉಚ್ಚಾಟಿಸಲ್ಪಟ್ಟಿದ್ದ ಡಚ್‌ನ ರೊಲ್ಯಾಂಟ್ ಒಲ್ಟಮನ್ಸ್ ಅವರಿಂದ ತೆರವಾದ ಸ್ಥಾನಕ್ಕೆ ಜೊಯೆರ್ಡ್‌ರನ್ನು ಆಯ್ಕೆ ಮಾಡಲಾಗಿದೆ.
ವಿಶ್ವಕಪ್ ವಿಜೇತ ಜೂನಿಯರ್ ತಂಡದ ಕೋಚ್ ಹರೇಂದ್ರ ಸಿಂಗ್‌ರನ್ನು ಸೀನಿಯರ್ ಮಹಿಳಾ ತಂಡದ ಉನ್ನತ ಪ್ರದರ್ಶನದ ವಿಶೇಷ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
ಮಹಿಳಾ ಹಾಕಿ ತಂಡದೊಂದಿಗೆ ಯುರೋಪ್ ಪ್ರವಾಸದಲ್ಲಿರುವ ಮಾರಿಜಿನ್ ಭಾರತಕ್ಕೆ ವಾಪಸಾದ ಬಳಿಕ ಸೆ.20 ರಂದು ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹರೇಂದ್ರ ಶನಿವಾರವೇ ತಮ್ಮ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
‘‘ಭಾರತೀಯ ಸೀನಿಯರ್ ಮಹಿಳಾ ತಂಡದ ಹಾಲಿ ಕೋಚ್ ಜೊಯೆರ್ಡ್ ಮಾರಿಜನ್ ಭಾರತದ ಪುರುಷರ ತಂಡದ ಮುಖ್ಯ ಕೋಚ್ ಆಗಿಯೂ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಹರೇಂದ್ರ ಸಿಂಗ್ ಸೀನಿಯರ್ ಮಹಿಳಾ ತಂಡದ ಉನ್ನತ ಪ್ರದರ್ಶನದ ವಿಶೇಷ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲು ನನಗೆ ಅತೀವ ಸಂತೋಷವಾಗುತ್ತಿದೆ’’ ಎಂದು ಸಚಿವ ರಾಥೋಡ್ ಟ್ವೀಟ್ ಮಾಡಿದ್ದಾರೆ.
ಮಾರಿಜನ್ ಹಾಗೂ ಹರೇಂದ್ರ ಸಿಂಗ್‌ರನ್ನು 2020ರ ಟೋಕಿಯೊ ಒಲಿಂಪಿಕ್ಸ್ ತನಕ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
‘‘ಗುರುವಾರ ನಡೆದ ಭಾರತದ ಕ್ರೀಡಾ ಪ್ರಾಧಿಕಾರ ಹಾಗೂ ಹಾಕಿ ಇಂಡಿಯಾ ನಡುವಿನ ಜಂಟಿ ಸಭೆಯ ವೇಳೆ ಹರೇಂದ್ರ ಸಿಂಗ್‌ರನ್ನು ಕೋಚ್‌ರನ್ನಾಗಿ ಆಯ್ಕೆ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. 2016ರಲ್ಲಿ ಲಕ್ನೊದಲ್ಲಿ ನಡೆದ ಜೂನಿಯರ್ ಪುರುಷರ ವಿಶ್ವಕಪ್‌ನಲ್ಲಿ ಕಿರಿಯ ಹಾಕಿ ಆಟಗಾರರು ಪ್ರಶಸ್ತಿ ಜಯಿಸಲು ನೀಡಿದ್ದ ಕೋಚಿಂಗ್‌ನ್ನು ಆಧರಿಸಿ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಸಿಂಗ್ 2008 ರಿಂದ 2009ರ ತನಕ ಪುರುಷರ ಹಾಕಿ ತಂಡದ ಕೋಚ್ ಆಗಿದ್ದರು’’ ಎಂದು ಹಾಕಿ ಇಂಡಿಯಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಆರಕ್ಕೂ ಅಧಿಕ ತಿಂಗಳಿಂದ ಭಾರತದಲ್ಲಿರುವ ಮಾರಿಜಿನ್ ಭಾರತದ ಪುರುಷರ ತಂಡದ ಮುಖ್ಯ ಕೋಚ್ ಹುದ್ದೆಗೆ ಉತ್ತಮ ಅಭ್ಯರ್ಥಿ ಎಂದು ಸಾಯ್ ಹಾಗೂ ಹಾಕಿ ಇಂಡಿಯಾದ ಜಂಟಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಕೋಚ್ ಹುದ್ದೆಗೆ ಜಾಹೀರಾತು ನೀಡುವ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುದ್ದಿ ಸಂಸ್ಥೆಗೆ ಹಾಕಿ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಭಾರತದ ಮಹಿಳಾ ತಂಡದ ಕೋಚ್ ಆಗಿ ಆಯ್ಕೆಯಾಗಿರುವ 43ರ ಹರೆಯದ ಮಾರಿಜಿನ್‌ಗೆ ಹಿರಿಯ ಪುರುಷರ ರಾಷ್ಟ್ರೀಯ ತಂಡದಲ್ಲಿ ಕೆಲಸ ಮಾಡಿರುವ ಅನುಭವವಿಲ್ಲ. ಹಾಕಿ ಇಂಡಿಯಾ ಹಾಗೂ ಸಾಯ್ ಒತ್ತಾಯದ ಬಳಿಕ ಕೋಚ್ ಹುದ್ದೆಯ ಕೊಡುಗೆಯನ್ನು ಸ್ವೀಕರಿಸಿದ್ದಾರೆ.
ನಿರ್ಗಮನ ಕೋಚ್ ಒಲ್ಟಮನ್ಸ್ 4 ವರ್ಷಗಳ ಹಿಂದೆ ಉನ್ನತ ಪ್ರದರ್ಶನದ ನಿರ್ದೇಶಕರಾಗಿ ಭಾರತಕ್ಕೆ ಬಂದಿದ್ದರು. ಪಾಲ್ ವ್ಯಾನ್ ಅಸ್ ಉಚ್ಚಾಟನೆಯ ಬಳಿಕ 2015ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.
ಮಾರಿಜಿನ್‌ರನ್ನು ನೂತನ ಕೋಚ್‌ರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಹಾಕಿ ಸಮುದಾಯ ಅಚ್ಚರಿ ವ್ಯಕ್ತಪಡಿಸಿದೆ. ಮೂರು ಪ್ರಮುಖ ಟೂರ್ನಿಗಳಾದ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ವಿಶ್ವಕಪ್‌ಗೆ ಮೊದಲು ಅನನುಭವಿ ಮಾರಿಜಿನ್‌ರನ್ನು ಆಯ್ಕೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಾಲೆಂಡ್ ಪರ ಆಡಿರುವ ಮಾರಿಜಿನ್ ಡಚ್‌ನ ಅಂಡರ್-21 ಮಹಿಳಾ ತಂಡ ಹಾಗೂ ಸೀನಿಯರ್ ಮಹಿಳಾ ತಂಡಗಳು ಕ್ರಮವಾಗಿ ವಿಶ್ವಕಪ್ ಹಾಗೂ ಹಾಕಿ ವಿಶ್ವ ಲೀಗ್‌ನಲ್ಲಿ ಚಿನ್ನ ಗೆಲ್ಲಲು ಕೋಚಿಂಗ್ ನೀಡಿದ್ದರು. 2011-14ರ ನಡುವೆ ಹಾಲೆಂಡ್‌ನ ಅಂಡರ್-21 ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು.
ಮುಂದಿನ ತಿಂಗಳು ಢಾಕಾದಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ನ ಮೂಲಕ ಮಾರಿಜಿನ್ ಭಾರತದ ಕೋಚ್ ಆಗಿ ವೃತ್ತಿ ಆರಂಭಿಸಲಿದ್ದಾರೆ.







