ಬಂಡಿ ರಸೂಲ್ ಖಾನ್
ರೂಪದರ್ಶಿಗಳು

ಡಿ.ವಿ. ಗುಂಡಪ್ಪ
ಡಿ.ವಿ. ಗುಂಡಪ್ಪನವರು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಬರೆದವರು. ಕವಿ, ಪತ್ರಕರ್ತ ಹಾಗೂ ಬರಹಗಾರರಾಗಿ 20ನೆ ಶತಮಾನದ ಪ್ರಥಮಾರ್ಧದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ತಮ್ಮ ಬಾಲ್ಯ ಕಾಲದಲ್ಲಿ ಶಿಕ್ಷಣ ಪಡೆಯಲು ನೆರವಾದ ರಸೂಲ್ಖಾನ್ ಎಂಬವರ ಕುರಿತು ಡಿವಿಜಿ ನೆನಪಿನ ಬರಹ.
ನಾನು ಪಾಸ್ ಮಾಡಿರುವ ಪರೀಕ್ಷೆಗಳು ಎರಡು. ಮೊದಲನೆಯದು ಕನ್ನಡ ಲೋವರ್ ಸೆಕಂಡರಿ. ಅದು ಬಹುಶಃ 1898-99ರಲ್ಲಿ. ಆ ಕಾಲಕ್ಕೆ ನಮ್ಮ ಊರಿಗೆ ಇಂಗ್ಲಿಷ್ ಸ್ಕೂಲ್ ಬಂದಿರಲಿಲ್ಲ. ಎರಡನೆಯ ಪರೀಕ್ಷೆ ಇಂಗ್ಲಿಷ್ ಲೋವರ್ ಸೆಕಂಡರಿ. ಇದನ್ನು ಪಾಸ್ ಮಾಡಿದ್ದು ಬಹುಶಃ 1900ರಲ್ಲಿ. ಇದರ ಕಥೆ ಬೇರೆ.
ಇಂಗ್ಲಿಷ್ ಲೋವರ್ ಸೆಕಂಡರಿ ಆದ ಮೇಲೆ ಮುಂದಿನ ಓದಿನ ಯೋಚನೆ. ನಮ್ಮ ಮನೆಯಲ್ಲಿ ಯಾರೂ ಅದಕ್ಕೆ ಹೆಚ್ಚು ಉತ್ಸಾಹಿಗಳಾಗಿರಲಿಲ್ಲ. ನನ್ನನ್ನು ಪರಸ್ಥಳಕ್ಕೆ ಕಳುಹಿಸುವುದು ನನ್ನ ಅಜ್ಜಿಗೆ ಸುತರಾಂ ಇಷ್ಟವಿರಲಿಲ್ಲ. ‘‘ಕಣ್ಣು ಮುಂದಿನ ಮಗು ಕಣ್ಣು ಮುಂದೆ ಇರಬೇಕು, ನಾನು ಬದುಕಿರುವಷ್ಟು ದಿವಸ’’ ಎಂದು ಆಕೆಯ ಹಟ. ಆಗ್ಗೆ ನನ್ನ ಅಜ್ಜಂದಿರು ತೀರಿಹೋಗಿದ್ದರು. ಆದ್ದರಿಂದ ಸಂಸಾರದ ಹಣಕಾಸಿನ ಮುಗ್ಗಟ್ಟು ಅನುಭವಕ್ಕೆ ಬರುತ್ತಿತ್ತು. ಆ ಕಾಲದಲ್ಲಿ ಪರಸ್ಥಳಕ್ಕೆ ಹಣ ಕಳುಹಿಸುವುದೆಂದರೆ ಕಷ್ಟದ ಮಾತು. ಮನೆಗೆ ದವಸ ಧಾನ್ಯ ಬರುತ್ತಿತ್ತು. ಹತ್ತು ಮಂದಿ ಭೋಜನಕ್ಕೆ ಬಂದರೆ ಚಿಂತೆಯಿಲ್ಲದೆ ಅವರಿಗೆ ಉಪಚಾರ ಮಾಡಬಹುದಾಗಿತ್ತು. ಹಣದ ಮಾತು ಬೇರೆ. ಆದ್ದರಿಂದ ನನ್ನ ಚಿಕ್ಕಜ್ಜಂದಿರು ಹಿಂದೇಟು ಹಾಕುತ್ತಿದ್ದರು.
ನನ್ನ ತಂದೆಗಾದರೋ ಮನಸ್ಸು ಡೋಲಾಯಮಾನವಾಗಿತ್ತು. ಮನೆಯೊಳಗಿನ ಸಂದರ್ಭ ನೋಡಿದರೆ ‘‘ಓದು ಇಷ್ಟೇ ಸಾಕು, ಹೆಚ್ಚು ಓದಿ ಏನಾಗಬೇಕಾಗಿದೆ? ಅಧ್ಯಯನ ಮಾಡಲಿ. ಸಂಸ್ಕೃತ ಕಲಿಯಲಿ’’ - ಇದು ಒಂದು ಪಕ್ಷ. ಇನ್ನೊಂದು ಪಕ್ಷ ಸ್ನೇಹಿತರದು: ‘‘ಈ ಹುಡುಗನನ್ನು ಹೇಗಾದರೂ ಓದಿಸಲೇಬೇಕು. ಅವನು ಇಂಗ್ಲಿಷ್ ಕಲಿಯಲೇಬೇಕು’’. ಇದು ಮಿತ್ರಪಕ್ಷ.
ಈ ಮಿತ್ರವರ್ಗದಲ್ಲಿ ಮುಖ್ಯರಾ ದವರು ರಸೂಲ್ಖಾನ್ ಸಾಹೇಬರು.
ರಸೂಲ್ಖಾನರನ್ನು ‘‘ಬಂಡಿ ರಸೂಲ್ಗಾಡು’’ ಎಂದು ಕರೆಯುತ್ತಿದ್ದರು. ಆತನಿಗೆ ಯಾವ ಓದೂ ಬಾರದು. ತನ್ನ ಹಿಂದೂಸ್ಥಾನಿ ಯ ಜೊತೆಗೆ ತೆಲುಗನ್ನು ಚೆನ್ನಾಗಿ ಮಾತನಾಡುತ್ತಿದ್ದ. ಕನ್ನಡವನ್ನೂ ಬಲ್ಲ. ನನ್ನ ವಿಷಯದಲ್ಲಿ ಉತ್ಸಾಹ-ಒಂದು ಪ್ರಮಾದದ ಕಾರಣದಿಂದ. ನಾನು ಮಹಾ ಬುದ್ಧವಂತ, ಇಂಗ್ಲಿಷ್ ಕಲಿತುಬಿಟ್ಟರೆ ಮೇಲು ಮೇಲಕ್ಕೆ ಬರುತ್ತೇನೆ-ಎಂದು ಆತನ ಭ್ರಾಂತಿ. ‘‘ಇಂಗ್ಲಿಷ್ ಅಕ್ಷರ ಕೂಡ ಬರದೆ ಇದ್ದವನು ಎರಡೇ ವರ್ಷದಲ್ಲಿ ಲೋವರ್ ಸೆಕಂಡರಿ ಪಾಸ್ ಮಾಡಿಬಿಟ್ಟನಲ್ಲ!’’ - ಇದು ಆ ಜನದ ಆಶ್ಚರ್ಯ.
ರಸೂಲ್ಖಾನರಿಗೆ ತಂದೆ ತಮ್ಮಂದಿರಿದ್ದರು. ಕೊಂಚ ಜಮೀನಿತ್ತು. ಆ ಆರಂಭವೇ ಆ ಮನೆಗೆ ಮುಖ್ಯ ಅನ್ನಾಧಾರ. ಅದರ ಜೊತೆಗೆ ಬಾಡಿಗೆಗೆ ಬಂಡಿ ಹೊಡೆಯುವುದು.
ಬೆಂಗಳೂರಿನಿಂದ ಮದರಾಸಿಗೆ ಹೋಗುವ ರಸ್ತೆಯಲ್ಲಿ ಅರವತ್ತನೆಯ ಮೈಲಿಯಲ್ಲಿ ಮುಳಬಾಗಲು. ಆ ಊರು ಮೊದಲಾಗುವ ಕಡೆ ರಸ್ತೆಯ ದಕ್ಷಿಣಕ್ಕೆ ತಿರುಗಿ 2 ಫರ್ಲಾಂಗು ಹೋದರೆ ಸೋಮೇಶ್ವರಪಾಳ್ಯ. ಆ ಪಾಳ್ಯಕ್ಕೆ ಮುಖ್ಯ ರಸ್ತೆಯಿಂದ ತಿರುಗುವ ಕಡೆ ಪೂರ್ವದಿಕ್ಕಿನಲ್ಲಿ ಒಂದಿಷ್ಟು ಬಯಲು. ಅದರಲ್ಲಿ ಮೂರು ನಾಲ್ಕು ಭಾರೀ ಹುಣಿಸೆಮರಗಳು. ಆ ಮರ ಗಳ ನಡುವಣ ಒಂದು ಹಳೆಯ ಮಣ್ಣುಮಾಳಿಗೆ ರಸೂಲ್ಖಾನರ ಮನೆ.
ರಸೂಲ್ಖಾನರು ಮುಖ್ಯವಾಗಿ ಇಟ್ಟುಕೊಂಡಿದ್ದ ಉದ್ಯೋಗ ನಮಾ ಜು. ದಿನಕ್ಕೆ ಐದು ಸಾರಿಯೋ ಏಳು ಸಾರಿಯೋ ನಮಾಜು ಮಾಡುವರು. ಸಾರಿ ಸಾರಿಯೂ ಸ್ನಾನ ಮಾಡುವರು. ಅವರ ಉಡುಪು: ತಲೆಯ ಮೇಲೆ ಒಂದು ಸಣ್ಣ ಮಾಸಲು ಟೋಪಿ, ನಡುವಿನ ಮೇಲೆ ಒಂದು ಚೌಕಳಿ ವಸ್ತ್ರ. ಇಷ್ಟೇ ಅವರ ದಿರಸು. ತುಂಬ ಚಳಿಯಾ ದಾಗ ಒಂದು ಬೊಂತೆಯನ್ನೋ ಜಮಖಾನವನ್ನೋ ಹೊದೆದುಕೊಳ್ಳುವರು.
ಮನುಷ್ಯ ಹೀಗೆ ಬಡವನಾಗಿದ್ದರೂ ಸಾಧು. ಒಳ್ಳೆಯತನದ ಜೊತೆಗೆ ಅವರಲ್ಲಿ ಸ್ವಲ್ಪ ಹಾಸ್ಯದ ಪ್ರವೃತ್ತಿ ಸೇರಿತ್ತು. ಕಳೆಕಳೆಯಾಗಿ ನಗುನಗುತ್ತ ಮಾತನಾಡುವರು. ಆದದ್ದರಿಂದ ಎಲ್ಲರಿಗೂ ಪ್ರಿಯರಾಗಿದ್ದರು.
ಮೇಲೆ ಹೇಳಿದ ಸೋಮೇಶ್ವರಪಾಳ್ಯದಲ್ಲಿ ಗಣ್ಯನಾದ ಒಬ್ಬ ಗೃಹಸ್ಥ ಮಾರಶೆಟ್ಟಿ ಎಂಬಾತ. ಈತ ಜಾತಿಯಲ್ಲಿ ಬಣಜಿಗ. ಈತನ ಉದ್ಯೋಗ ತೆಲುಗು ಸ್ಕೂಲಿನಲ್ಲಿ ಉಪಾಧ್ಯಾಯತನ. ನೋಟಕ್ಕೆ ವರ್ಚಸ್ವಿಯಾಗಿದ್ದ. ಆತ ಮೈಸೂರಿನಲ್ಲಿ ಕೆಲವು ಕಾಲ ಅವರ ಕುಲಗುರುಗಳಾದ ವೆಂಕಟಾಚಾರ್ಯರ ಮನೆಯಲ್ಲಿದ್ದುಕೊಂಡು ಮೆಟ್ರಿಕ್ಯುಲೇಷನ್ವರೆಗೂ ಇಂಗ್ಲಿಷ್ ವಿದ್ಯೆ ಓದಿದ್ದ. ನಡೆನುಡಿಗಳಲ್ಲಿ ತುಂಬ ಸಂಭಾವಿತನಾಗಿದ್ದ. ಊರಿನ ಜನರೆಲ್ಲ ಆತನನ್ನು ಮೆಚ್ಚಿ ಕೊಂಡಿದ್ದರು. ಯಾವ ತಂಟೆ ಯಾವ ತಕರಾರು ಬಂದರೂ ಎಲ್ಲರೂ ಮಾರಶೆಟ್ಟಿಯ ಬಳಿಗೆ ಹಿತೋಪದೇಶಕ್ಕಾಗಿ ಬರುವರು. ಆತ ತಾಳ್ಮೆವಂತ, ಸಭ್ಯ.
ಆತನಿಗೂ ನನ್ನ ತಂದೆಗೂ ಗಾಢವಾದ ಸ್ನೇಹ. ಈ ಸ್ನೇಹಗೋಷ್ಠಿಗೆ ಸೇರಿದ್ದವರು ಸುಬ್ಬಾ ಭಟ್ಟರು, ರಾಮಚಂದ್ರಾಚಾರ್ರು, ವಗೈರೆ. ಈ ಮಿತ್ರಗೋಷ್ಠಿಗೆ ರಸೂಲ್ಖಾನರು ಸೇರಿದ್ದರು.
ನನ್ನ ಭವಿಷ್ಯ
ಈ ಗೋಷ್ಠಿ ಸೇರಿದಾಗ ನನ್ನ ಭವಿಷ್ಯ ಚರ್ಚೆಗೆ ಬರುತ್ತಿತ್ತು. ನನ್ನ ತಂದೆ ಪರಸ್ಥಳದ ಓದು ಸಾಧ್ಯವೇಇಲ್ಲವೆಂದು ಹೇಳುತ್ತಿದ್ದರು. ಮಿಕ್ಕವರು ಒಂದು ಕ್ಷಣ ಹೀಗೆ, ಒಂದು ಕ್ಷಣ ಹಾಗೆ ತೂಗಾಡು ತ್ತಿದ್ದರು. ರಸೂಲ್ ಮಾತ್ರ ಮಿಕ್ಕವರ ಮಾತು ಮುಗಿದ ಮೇಲೆ ತೀರ್ಮಾನ ಹೇಳಿದರು:
‘‘ನೀವೆಲ್ಲ ಏನಾದರೂ ಹೇಳಿ. ಆ ಹುಡುಗನನ್ನು ಓದಿಸಲೇಬೇಕು. ನನ್ನ ಕೈಯಲ್ಲಾಗುವಷ್ಟು ನಾನು ಮಾಡಿಬಿಡುತ್ತೇನೆ. ಅದೇನು ಅಂತೀರೋ- ಶನಿವಾರ ನಾನು ಹೇಗಿದ್ದರೂ ಬಂಡಿ ಹೊಡೆದುಕೊಂಡು ಹೋಗುತ್ತೇನೆ, ರಾಬರ್ಟ್ಸನ್ ಪೇಟೆಗೆ. ಅಲ್ಲಿಂದ ಬೌರಿಂಗ್ಪೇಟೆ ಮೂರು ನಾಲ್ಕು ಮೈಲಿ. ಈ ಹುಡುಗನನ್ನು ನಾನು ನನ್ನ ಗಾಡಿಯಲ್ಲಿ ಹಾಕಿಕೊಂಡು ಬೌರಿಂಗ್ಪೇಟೆ ರೈಲ್ವೆ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಬೆಂಗಳೂರಿಗೆ ಟಿಕೆಟ್ ತೆಗೆದುಕೊಟ್ಟು ಒಂದು ರೂಪಾಯಿ ಕೈಖರ್ಚಿಗೆ ಕೊಡುತ್ತೇನೆ. ಅವನು ತಿರುಪೆ ಮಾಡಿಕೊಂಡಾದರೂ ಅಲ್ಲಿಯೇ ಓದಲಿ. ಅವನ ಓದಂತೂ ನಡೆಯಲೇಬೇಕು’’.
ರಸೂಲ್ಖಾನರ ಈ ಮಾತನ್ನು ಕೇಳಿ ಎಲ್ಲರೂ ಬೆರಗಾದರು. ‘‘ಇವನಿಗೇನು ಇಷ್ಟು ಹಟ! ಒಂದು ಅಕ್ಷರ ಕಂಡವನಲ್ಲ. ಮನೆಯಲ್ಲಿ ಊಟಕ್ಕೆ ಪರದಾಟ. ಇದು ಯಾತರ ಧೈರ್ಯ?’’ - ಎಂದರು. ಕೆಲವರು. ರಸೂಲ್ಖಾನ್ ಸಾಹೇಬರು ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ‘‘ನನಗೆ ಏನೋ ಅಲ್ಲಿ ಹೇಳ್ತದೆ- ಹೀಗೆ ಮಾಡಬೇಕಂತ’’ - ಎಂದರು. ಅಲ್ಲಿಂದ ಮುಂದಿನ ಶನಿವಾರ ನನ್ನ ಪ್ರಯಾಣ.
ಆ ಕಾಲದಲ್ಲಿ ಚಿನ್ನದ ಗಣಿ ದೊಡ್ಡ ವ್ಯಾಪಾರ ಸ್ಥಳ. ರಾಬರ್ಟ್ಸನ್ ಪೇಟೆಯ ಬಳಿ ರವಿವಾರ ಸಂತೆ. ಭಾರೀ ಸಂತೆ. ಹತ್ತಾರು ಸಾವಿರ ಜನ ಅಲ್ಲಿ ಬಂದು ತಮ್ಮ ತಮ್ಮ ಕುಟುಂಬಕ್ಕೆ ಬೇಕಾದ ಒಂದು ವಾರದ ಮಟ್ಟಿನ ಅಕ್ಕಿ ಬೇಳೆ ರಾಗಿ ಮೊದಲಾದ ಸಾಮಗ್ರಿಗಳನ್ನು ವ್ಯಾಪಾರ ಮಾಡಿಕೊಂಡು ಹೋಗುವರು. ಆ ಸಂತೆಯ ವ್ಯಾಪಾರಕ್ಕಾಗಿ ಮುಳಬಾಗಲಿನಿಂದ ದವಸ ಧಾನ್ಯಗಳನ್ನು ವರ್ತಕರು ಸಾಗಿಸಿಕೊಂಡು ಹೋಗುತ್ತಿದ್ದರು.
ಈ ಭರ್ತಿ ಗಾಡಿಗಳು ಸಾಮಾನ್ಯವಾಗಿ ಎಂಟು ಹತ್ತು ಜೊತೆಯಾಗಿ ರಾತ್ರಿ ಪ್ರಯಾಣ ಮಾಡುತ್ತಿದ್ದವು. ಶನಿವಾರ ರಾತ್ರಿ ಸುಮಾರು ಹತ್ತುಗಂಟೆಗೆ ಹೊರಡುವವು. ರವಿವಾರ ಬೆಳಿಗ್ಗೆ ಐದು ಗಂಟೆಗೆ ರಾಬರ್ಟ್ಸನ್ ಪೇಟೆಯನ್ನು ತಲುಪುವವು.
ಆ ಪ್ರಯಾಣ ನನ್ನ ಪಾಲಿಗೆ ದೊಡ್ಡ ವಿನೋದವಾಯಿತು. ಗಾಡಿಯಲ್ಲಿ ಹಾಸಿಗೆ ದಿಂಬು ಮೊದಲಾದದ್ದೇನೂ ಇಲ್ಲ. ಅಕ್ಕಿ ಬೇಳೆ ಮೂಟೆಗಳು ಎಗ್ಗಡದಿಗ್ಗಡಾಗಿದ್ದವು. ಅದರ ಜೊತೆಗೆ ಇಕ್ಕಟ್ಟು; ಕೈಕಾಲು ತಿರುಗಿಸುವುದಕ್ಕೆ ಜಾಗವಿರಲಿಲ್ಲ. ಇಷ್ಟೆಲ್ಲ ಆದರೂ ಗಾಡಿ ಹೊಡೆಯುವವರ ಹಾಡಿಕೆ, ಅವರ ಮಾತು ಕಥೆ-ಇವು ಬೇಸರವನ್ನು ಕಳೆದವು.
ಚಂಗಪ್ಪ
ಆ ಏಳೆಂಟು ಬಂಡಿ ಹೊಡೆಯುವವರ ಪೈಕಿ ಚಂಗಪ್ಪ ಎಂಬಾತ ಒಬ್ಬ. ಈತನು ಸೋಮೇಶ್ವರ ಪಾಳ್ಯದವನು. ಬಹುಶಃ ಮಾರಶೆಟ್ಟಿಗೆ ನಂಟ. ಈತ ಗಾಡಿಯ ಮುಂಕಣಿಯ ಮೇಲೆ ಕುಳಿತು ಎತ್ತುಗಳನ್ನು ನಡೆಸುವನು. ಊರು ಬಿಟ್ಟು ಒಂದೆರಡು ಮೈಲಿ ಹೋದ ಮೇಲೆ ಸುಮಾರು ಹನ್ನೊಂದು ಹನ್ನೆರಡು ಗಂಟೆಯಲ್ಲಿ ಹಾಡಲಾರಂಭಿಸುವನು, ತನ್ನ ವಿನೋದಕ್ಕಾಗಿ. ತಂಪಿನ ವೇಳೆ. ದಾರಿಯ ಧೂಳು ವಾಯು ಮಂಡಲವನ್ನು ಬಿಟ್ಟು ನೆಲಕ್ಕಿಳಿದಿತ್ತು. ಅಂಥ ಪ್ರಶಾಂತ ವಾತಾವರಣದಲ್ಲಿ ಹೊರಟ ಕಂಠಸ್ವರದ ಇಂಪು ಬಹು ದೂರ ವ್ಯಾಪಿಸುವುದು. ನಮ್ಮ ಚಂಗಪ್ಪನ ಹಾಡಿಕೆ ಇದು.
ಬಂಡಿಯ ಚಂಗಪ್ಪನ ಹೆಸರು ಬಂದಾಗ ನನಗೆ ಆತನ ತಂಗಿಯೋ ಅಕ್ಕನೋ ಆದ ಚಂಗಮ್ಮನ ಹೆಸರು ಜ್ಞಾಪಕಕ್ಕೆ ಬರುವುದು ಸ್ವಾಭಾವಿಕ. ಆಕೆ ಬಹು ಕಳೆಕಳೆಯಾದ ಮುತ್ತೈದೆ. ಆ ಸಂಸಾರಕ್ಕೆ ಒದಗಿಸಲು ಒಂದೆರಡು ಮನೆಗೆ ಹಾಲುಕೊಡುವ ಕೆಲಸವನ್ನೂ ಮಾಡಬೇಕಾಯಿತು. ಹಾಗೆ ಚಂಗಮ್ಮ ದಿನ ದಿನವೂ ಬೆಳಗ್ಗೆ ನಮ್ಮ ಮನೆಗೆ ಬರುತ್ತಿದ್ದಳು- ನಮ್ಮ ಮನೆಯ ಆಕಳು ಎಮ್ಮೆ ಹಾಲು ಕೊಡದಿದ್ದಾಗ ಅಥವಾ ಆ ಹಾಲು ಸಾಲದೇ ಇರುವಾಗ. ಆಕೆ ಚಿಕ್ಕ ಹುಡುಗಿಯಾಗಿದ್ದಾಗ ಆಕೆಯನ್ನು ನೋಡುವುದೇ ನನಗೊಂದು ಸಂತೋಷವಾಗಿತ್ತು. ಹಣೆಯ ತುಂಬ ಕುಂಕುಮ. ಮೈತುಂಬ ಹೊದೆದ ಸೀರೆ. ಎಲ್ಲ ಚೊಕ್ಕಟ.ಮಾತು ಬಹು ನಯ. ಬಹು ಗಂಭೀರ ವಾದ ಹೆಂಗಸು. ಈ ಮಾತನ್ನು ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ, ಘನತೆ ಗಂಭೀರಗಳುಳ್ಳ ನಡವಳಿಕೆ ಹೆಚ್ಚಿನ ಐಶ್ವರ್ಯದಿಂದ ಬರತಕ್ಕದ್ದಲ್ಲ; ಅದು ಮನಸ್ಸಿನ ಒಳಗೆ ಆಗಿರುವ ಒಂದು ಸಂಸ್ಕಾರದಿಂದ ಬರತಕ್ಕದ್ದು- ಎಂಬುದನ್ನು ತೋರಿಸುವುದಕ್ಕೆ. ನಾನು ಕೆಲ ಮಂದಿ ಐಶ್ವರ್ಯ ವಂತರ ಮನೆಗಳನ್ನು ನೋಡಿ ದ್ದೇನೆ. ಆ ಮನೆಯ ಜನಕ್ಕೆ ಬಡ ಚಂಗಮ್ಮನ ಶುಚಿತ್ವ ಸೌಜನ್ಯಗಳಲ್ಲಿ ಹತ್ತರಲ್ಲೊಂದು ಪಾಲನ್ನಾದರೂ ದೇವರು ಕೊಡಲಿಲ್ಲ ವಲ್ಲ!- ಎಂದುಕೊಂಡಿದ್ದೇನೆ.

ಡಿ.ವಿ.ಜಿ. ಕುಟುಂಬ
ಉಷಾಗಾನ
ಚಂಗಪ್ಪ ಬಂಡಿ ಹೊಡೆಯುವಾಗ ಬೆಳಗಿನ ಜಾವದಲ್ಲಿ ಹಾಡುತ್ತಿದ್ದದ್ದು ಬಹು ಇಂಪಾಗಿತ್ತು ಬಹುದೂರ ತೆಳುಗಾಳಿಯ ಮೇಲೆ ತೇಲಿ ಹರಿಯುತ್ತಿತ್ತು. -ಎಂದು ಹೇಳಿದೆ. ಆತನ ಎರಡು ಮೂರು ಸಾರಿಯ ಹಾಡಿಕೆಯನ್ನು ನಾನು ಕೇಳಿದ್ದೇನೆ. ಆ ಹಾಡಿಕೆಯಲ್ಲಿ ರಾಗವಿ ರುತ್ತಿತ್ತು. ರಾಗವೆಂದರೆ ರಂಜನೆ. ಮನೋರಂಜನೆ ಮಾಡಲಾರದ ಸದ್ದನ್ನು ಯಾರಾದರೂ ಹಾಡಿಕೆ ಎಂದಾರೇ?
ಚಂಗಪ್ಪನದು ನಿಜವಾದ ಹಾಡಿಕೆ. ಅದು ಆತನ ಅಂತರಂಗದಿಂದ ಹೊರ ಹೊಮ್ಮಿ ಬಂದ ನೈಜವಾದ ಆನಂದಪ್ರವಾಹ. ಆದರೆ ಅದಕ್ಕೆ ಸ್ವರಮೇಳ ಕಲಾನಿಧಿಯ ಲಕ್ಷಣಗಳನ್ನು ಅನ್ವಯಿಸಿ ರಾಗನಿರ್ಣಯ ಮಾಡಬೇಕೆಂದರೆ ಅದು ಅಸಾಧ್ಯದ ಕೆಲಸ. ನಾನು ಚಂಗಪ್ಪನ ಹಾಡು ಕೇಳಿದಾಗ ನನಗೆ ರಾಗಗಳ ಹೆಸರುಗಳು ಗೊತ್ತಿರಲಿಲ್ಲ. ಗುರುತು ಮಾಡುವ ಶಕ್ತಿ ಇರಲಿಲ್ಲ.

ಬಾಲಕ ಡಿ.ವಿ.ಜಿ.
ನನ್ನೊಡನೆ ಇದ್ದ ದೊಡ್ಡವರನ್ನು ಕೇಳಿದಾಗ ಅವರು ‘‘ರಾಗದ ಹೆಸರಿನಿಂದ ನಿನಗೇನು? ಕಿವಿಗೆ ಇಂಪಾಗಿದೆಯೋ ಇಲ್ಲವೋ? ಇನ್ನೂ ಕೇಳಬೇಕೆನಿಸುತ್ತದೋ ಇಲ್ಲವೋ?’’- ಎಂದು ನನಗೆ ಪ್ರತಿಪ್ರಶ್ನೆ ಹಾಕಿ ಬಾಯಿ ಮುಚ್ಚಿಸಿದರು. ನನಗೆ ಈಗ ಅನ್ನಿಸುತ್ತದೆ; ಆತ ಭೂಪಾಳಿ, ರೇಗುಪ್ತಿ, ಸಾವೇರಿ- ಈ ಮೂರು ನಾಲ್ಕು ಪ್ರಾತಃಕಾಲದ ರಾಗಗಳನ್ನು ಬೆರಕೆಮಾಡಿಕೊಂಡು ಹಾಡುತ್ತಿದ್ದನೆಂದು. ‘‘ಏರು ಕಾಡ ತೋಪುಲೋನ’’ -ಇಷ್ಟು ಮಾತು ನನ್ನ ಜ್ಞಾಪಕದಲ್ಲಿದೆ. ಯಾವುದೋ ನದಿಯ ಪಕ್ಕದ ತೋಪಿನಲ್ಲಿ ಏನೋ ಪ್ರಸಂಗ ನಡೆಯಿತಂತೆ. ಇದನ್ನು ಒಂದೆರಡು ನಿಮಿಷ ರಾಗ ಸೆಳೆಯುವನು. ಸಂದರ್ಭವನ್ನರಿತು ಆ ಸಮೀಪದಲ್ಲಿದ್ದ ಜನ ನಗುವರು. ಮತ್ತೆ ಹಾಡು. ಪ್ರಯಾಣದ ಬೇಸರ ತೋರದೆಯೇ ದಾರಿ ಕಳೆದುಹೋಗುವುದು. ಈಗ ರಸೂಲ್ಖಾನನ ಮಾತಿಗೆ ಹಿಂದಿರುಗೋಣ.
ಸ್ವಾರ್ಥತ್ಯಾಗ
ರಸೂಲ್ಖಾನರು ಪ್ರತಿಜ್ಞೆ ಮಾಡಿದ್ದಂತೆ ನನ್ನನ್ನೂ ನನ್ನ ಮೂಟೆಯನ್ನೂ ತನ್ನ ಬಂಡಿಯಲ್ಲಿ ಹಾಕಿಕೊಂಡು ಗಾಡಿಯ ನ್ನೋಡಿಸಿದರು. ಈ ವೇಳೆಗೆ ನನ್ನ ತಂದೆಗೆ ಮನಸ್ಸು ಒಂದು ನಿಶ್ಚಯಕ್ಕೆ ಬಂದಿತ್ತು. ಆತ ಇನ್ನೊಂದು ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡಿದರು.
ರಾಬರ್ಟ್ಸನ್ ಪೇಟೆಗೆ ಬಂದದ್ದಾಯಿತು. ಅಲ್ಲಿಂದ ರೈಲು ಹತ್ತಿ ಬೌರಿಂಗ್ ಪೇಟೆಗೆ ಬಂದ ದ್ದಾಯಿತು. ಅಲ್ಲಿಂದ ಮುಂದಕ್ಕೆ ಬೆಂಗಳೂರನ್ನು ತಲುಪಿದ್ದೂ ಆಯಿತು. ಅಲ್ಲಿಂದ ಮುಂದಿನ ಕಥೆ ಈಗ ಉದ್ದೇಶದಲ್ಲಿಲ್ಲ.
ರಸೂಲ್ಖಾನರ ಮನಸ್ಸು ಎಂಥಾದ್ದು, ಪ್ರತಿಜ್ಞೆ ಎಂಥಾದ್ದು ಎಂಬುದನ್ನು ತೋರಿಸುವುದೇ ಸದ್ಯಕ್ಕೆ ನನ್ನ ಉದ್ದೇಶ.
ರಸೂಲ್ಖಾನರಂಥ ವ್ಯಕ್ತಿ ಈ ಕಾಲದಲ್ಲಿ, ಎಂದರೆ 1971ರಲ್ಲಿ ಅಪರೂಪ. ಎಪ್ಪತ್ತು ವರ್ಷ ಹಿಂದೆ ಅದು ಅಪರೂಪವಾಗಿರಲಿಲ್ಲ. ಸಾಮಾನ್ಯವಾಗಿ ನಮ್ಮ ಎಲ್ಲ ಊರುಗಳಲ್ಲಿಯೂ ಅಂಥ ಜನ ಇಬ್ಬರು ಮೂವರಾದರೂ ಇರುತ್ತಿದ್ದರು. ಅವರನ್ನು ಹೊಂದಿಕೊಂಡು ಅವರಿಗೆ ಸಹಾಯವಾಗಿ ಒಳ್ಳೆಯ ಕೆಲಸಕ್ಕೆ ಮನಸಾರ ನುಗ್ಗಿ ಬರುತ್ತಿದ್ದ ಹತ್ತಿಪ್ಪತ್ತು ಮಂದಿ ಇರುತ್ತಿದ್ದರು. ಅವರಿಗೆ ಹಣವೆಂದರೆ ಕಷ್ಟ. ಒಂದು ದೊಡ್ಡ ಉದ್ದೇಶ, ಒಂದು ಉಪಕಾರಬುದ್ಧಿ ಮತ್ತು ಅದಕ್ಕೆ ಬೇಕಾದ ಸ್ವಾರ್ಥತ್ಯಾಗಸಿದ್ಧತೆ ಆಕೃತ್ರಿಮವಾಗಿ, ನೈಜವಾಗಿ ಅವರಿಗೆ ಬರುತ್ತಿತ್ತು.
ಫೋಟೊ ಕೃಪೆ: ಕನ್ನಡ ಕವಿ ಬಳಗ







