ಓಣಂ ಕೋಮು ಸಾಮರಸ್ಯದ ಹಬ್ಬ: ಸಚಿವ ಪ್ರಮೋದ್

ಉಡುಪಿ, ಸೆ.10: ಸರ್ವ ಧರ್ಮೀಯರು ಆಚರಿಸುವ ದೇಶದ ಏಕೈಕ ಹಬ್ಬ ಓಣಂ. ಇದು ಕೋಮು ಸಾಮರಸ್ಯ ಬಿಂಬಿಸುವ ಹಬ್ಬವಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ವತಿ ಯಿಂದ ರವಿವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಓಣಂ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೇರಳ ಹಾಗೂ ಅವಿಭಜಿತ ದ.ಕ. ಜಿಲ್ಲೆಗಳ ವೈವಿಧ್ಯಮಯ ಹಾಗೂ ಪ್ರಬಲ ಸಂಸ್ಕೃತಿಗಳಲ್ಲಿ ಸಾಮ್ಯತೆ ಇದೆ. ಕೇರಳ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದ್ದರೆ ಅವಿಭಜಿತ ದ.ಕ. ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗಲ್ಪ್ ದೇಶಗಳ ಪ್ರಗತಿಯಲ್ಲಿ ಕೇರಳಿಗರ ಕೊಡುಗೆ ಅಪಾರ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಮಧು ಪಿ., ಮಂಗಳೂರು ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ರಾಜನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಡಾ.ಟಿ.ಎನ್.ಶ್ರೀಧರ್ ಕುರುಪ್ ಅವರನ್ನು ಸನ್ಮಾನಿಸಲಾಯಿತು.
ಆಚರಣೆಯ ಪ್ರಯುಕ್ತ ಮಕ್ಕಳಿಗೆ ಸಂಗೀತ ಹಾಗೂ ನೃತ್ಯ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಅಧ್ಯಕ್ಷ ಟಿ.ಎ.ರವಿ ರಾಜನ್, ಕಾರ್ಯದರ್ಶಿ ಮೋಹನ್‌ದಾಸ್, ಕೋಶಾಧಿಕಾರಿ ಸಂತೋಷ್ ಕುಮಾರ್ ಎಂ., ಆಚರಣಾ ಸಮಿತಿಯ ಸಂಚಾಲಕ ಕೃಷ್ಣನ್ ಎಂ. ಮೊದಲಾದವರು ಉಪಸ್ಥಿತರಿದ್ದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







