ಮಾರಕ ಕಾಯಿಲೆಗಳ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ: ಸಚಿವ ರಮೇಶ ಕುಮಾರ್

ಸಾಗರ, ಸೆ.10: ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ವಿಚಿತ್ರ ಕಾಯಿಲೆಗಳಿವೆ. ಹಂದಿಗೋಡು, ಎಂಡೋಸಲ್ಫಾನ್ ಸೇರಿದಂತೆ ವಿಚಿತ್ರ ಕಾಯಿಲೆಗಳ ನಿಯಂತ್ರಣಕ್ಕೆ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ತಿಳಿಸಿದರು.
ತಾಲೂಕಿನ ಕಲ್ಮನೆ ಸಮೀಪದ ಮಾಜಿ ವಿಧಾನ ಪರಿಷತ್ ಸದಸ್ಯೆ ಪ್ರಫುಲ್ಲಾ ಮಧುಕರ್ ಮನೆಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಬಾಧಿಸುತ್ತಿರುವ ಹಂದಿಗೋಡು ಸಿಂಡ್ರೋಮ್ ಕಾಯಿಲೆ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಸರ್ಕಾರ ಹೆಚ್ಚಿನ ವೇತನ ನೀಡಲು ಸಿದ್ಧರಿದ್ದರೂ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಬರುತ್ತಿಲ್ಲ. ಸರ್ಕಾರ ವೈದ್ಯರಿಗೆ 1.25 ಲಕ್ಷ ರೂ. ವೇತನ ಕೊಡಲು ಸಿದ್ಧವಿದೆ. ಹೊಸದಾಗಿ ವೈದ್ಯ ಪದವಿ ಪಡೆದವರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವಂತೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಬಹುತೇಕ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯ ಸಿಬ್ಬಂದಿ ಕೊರತೆ ಇದೆ. ಇದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಪ್ರಾಕ್ಟಿಸ್ ಮಾಡಿದರೆ ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ದೂರು ನೀಡಿದರೆ ತಕ್ಷಣ ಅಂತಹ ವೈದ್ಯರನ್ನು ಅಮಾನತ್ತುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಷ್ಟು ಖಾಸಗಿ ನರ್ಸಿಂಗ್ ಹೋಂಗಳಿವೆ, ಅದರಲ್ಲಿ ಎಷ್ಟು ಜನ ಸರ್ಕಾರಿ ವೈದ್ಯರು ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗಿದ್ದು, ಶೀಘ್ರ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆರೋಗ್ಯ ಇಲಾಖೆ ಎನ್ನುವುದೆ ಒಂದು ಸಮುದ್ರ. ಅನೇಕ ಲೋಪಗಳಿವೆ. ಅದನ್ನು ಹಂತಹಂತವಾಗಿ ಸರಿಪಡಿಸಲಾಗುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಸಣ್ಣ ಘಟನೆ ನಡೆದರೂ ಅದನ್ನು ವಿಜೃಂಭಿಸುವ ಕೆಲಸ ನಡೆಯುತ್ತಿದೆ. ರಾಜಕಾರಣಿಯಿಂದ ಹಿಡಿದು ತಳಮಟ್ಟದ ವ್ಯಕ್ತಿಯವರೆಗೂ ಆರೋಗ್ಯ ಸಮಸ್ಯೆ ಉಂಟಾದಾಗ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ, ಜ್ಯೋತಿ, ಶೋಭಾ ಲಂಬೋದರ್. ಪ್ರೇಮ ಶೆಟ್ಟಿ, ಡಾ. ಬಿ.ಜಿ.ಸಂಗಂ ಇನ್ನಿತರರು ಹಾಜರಿದ್ದರು.







