ವಾಹನಗಳಿಗೆ ಇಂಧನ ಹಾಕಿಸುವಾಗ ಇರಲಿ ಎಚ್ಚರ!

ಮಂಗಳೂರು, ಸೆ.10: ನೀವು ನಿಮ್ಮ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ಸಹಿತ ಇತರ ವಾಹನಗಳಿಗೆ ಬಂಕ್‌ಗಳಲ್ಲಿ ಇಂಧನ ಹಾಕಿಸುವಾಗ ಎಚ್ಚರ ವಹಿಸುವುದು ಅಗತ್ಯ. ಬಂಕ್‌ಗಳಲ್ಲಿ ಇಂಧನ ಸುರಿಯುವ ಸಿಬ್ಬಂದಿಯನ್ನು ನಂಬಿ ನೀವು ಎಚ್ಚರಿಕೆ ತಪ್ಪಿದರೆ ನೀವೇ ತೊಂದರೆಯನ್ನು ಅನುಭವಿಸಬೇಕಾದೀತು... ಜೋಕೆ!
ಈಗಾಗಲೇ ಈ ರೀತಿಯ ಎರಡು ಘಟನೆಗಳು ಮಂಗಳೂರಿನಲ್ಲಿ ನಡೆದಿವೆ. ಇಂಧನ ತುಂಬಿಸಿಕೊಳ್ಳಲು ಪಂಪ್‌ಗಳಿಗೆ ಆಗಮಿಸುವ ವಾಹನ ಮಾಲಕರು ತಮ್ಮ ವಾಹನಗಳನ್ನು ಬಂಕ್‌ಗಳ ಮುಂದೆ ನಿಲ್ಲಿಸಿ ವಾಹನದ ಟ್ಯಾಂಕ್‌ನ ಕೀಯನ್ನು ತೆರೆದು ಸುಮ್ಮನಿರುತ್ತಾರೆ. ಇಲ್ಲಿ ನೀವು ಸ್ವಲ್ಪ ಎಚ್ಚರ ತಪ್ಪಿದರೆ ನಿಮ್ಮ ವಾಹನದ ಟ್ಯಾಂಕ್‌ನಲ್ಲಿ ಪೆಟ್ರೋಲ್ ಬದಲು ಡೀಸೆಲ್ ತುಂಬಬಹುದು. ಅಥವಾ ನೀವು ನಂಬಿದ ಪಂಪ್ ಸಿಬ್ಬಂದಿ ನಿಮ್ಮ ವಾಹನಕ್ಕೆ ಡೀಸೆಲ್ ಬದಲು ಪೆಟ್ರೋಲ್ ಹಾಕಿಯಾರು...!
ಬಂಕ್‌ನ ಸಿಬ್ಬಂದಿಯವರ ಅಚಾತುರ್ಯಕ್ಕೆ ಬಂಕ್‌ನವರು ನೀಡುವ ಕಾರಣವೇನು ಗೊತ್ತೇ? ಪೆಟ್ರೋಲ್ ಪಂಪ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧ ಇದ್ದರೂ ಬಂಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಟ್ಸ್‌ಆ್ಯಪ್‌ಗಳಲ್ಲಿ ತಲ್ಲೀನರಾಗಿರುತ್ತಾರಂತೆ. ಆದ್ದರಿಂದಲೇ ಇಂತಹ ಅಚಾತುರ್ಯ ನಡೆಯುತ್ತದಂತೆ. ಬಂಕ್‌ನವರ ಈ ಆರೋಪಕ್ಕೆ ಫುಷ್ಟಿ ನೀಡುವಂತೆ ಕಳೆದ ಶುಕ್ರವಾರ ಇಂತಹದ್ದೇ ಅಚಾತುರ್ಯ ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ನಡೆದಿದೆ.
ಕಾರುಗಳಿಗೆ ಇಂಧನ ತುಂಬಿಸುವಾಗ ಬಂಕ್‌ನ ಸಿಬ್ಬಂದಿ ಗೊಂದಲಕ್ಕೀಡಾಗುವುದು ಸಾಮಾನ್ಯ. ಯಾಕೆಂದರೆ ಕೆಲವು ಕಾರುಗಳು ಡೀಸೆಲ್‌ನದ್ದಾಗಿದ್ದರೆ, ಮತ್ತೆ ಕೆಲವು ಪೆಟ್ರೋಲ್ ಕಾರುಗಳಾಗಿರುತ್ತವೆ. ಆದರೆ, ಆಶ್ಚರ್ಯವೆಂದರೆ ಸಿಬ್ಬಂದಿಯೋರ್ವ ಡೀಸೆಲ್ ಸುರಿದಿರುವುದು ಬೈಕ್‌ಗೆ. ಬಂಕ್‌ನಲ್ಲಿ ಇಂಧನ ಹಾಕುವ ನಾಲ್ಕು ನಳಿಗೆಗಳು ಒಟ್ಟೊಟ್ಟಿಗೆ ಇದ್ದವು. ಆ ಸಿಬ್ಬಂದಿ ಯಾವ ಲೋಕದಲ್ಲಿ ಇದ್ದನೋ ಗೊತ್ತಿಲ್ಲ. ಆ ನಾಲ್ಕು ನಳಿಗೆಯ ಪೈಕಿ ಒಂದು ನಳಿಗೆಯನ್ನು ಬೈಕ್‌ನ ಟ್ಯಾಂಕ್‌ಗೆ ಇಟ್ಟಿದ್ದ.
ಬೈಕ್ ಸುಮಾರು 2 ಕಿ.ಮೀ.ನಷ್ಟು ಚಲಿಸಿತ್ತು. ಚಾಲನೆಯಲ್ಲೇ ಬೈಕ್‌ನ್ನು ಹಿಂದಿನಿಂದ ಎಳೆದಾಡುವ ಅನುಭವ. ಟ್ಯಾಂಕ್‌ನೊಳಗೆ ಗಾಳಿ ತುಂಬಿರಬಹುದೆಂದು ಅನಿಸಿದ್ದೆ. ಮತ್ತೆ ಎಷ್ಟು ಕಿಕ್ ಹೊಡೆದರೂ ಸ್ಟಾರ್ಟ್ ಆಗಲೇ ಇಲ್ಲ. ಕೊನೆಗೂ ಹತ್ತಿರದ ಮೆಕ್ಯಾನಿಕ್ ಬಳಿ ತೋರಿಸಿದೆ. ಅಲ್ಲಿ ಮೆಕ್ಯಾನಿಕ್‌ನ ಗಮನಕ್ಕೆ ಬಾರದೆ ಅವರು ಬಿಡಿ ಭಾಗ ಹೋಗಿರಬಹುದೆಂದು ಹೇಳಿ, ಹೊಸತು ತಂದು ಅಳವಡಿಸಿದರು. ಆದರೂ ಸ್ಟಾರ್ಟ್ ಆಗಲಿಲ್ಲ. ಟ್ಯಾಂಕ್‌ನೊಳಗೆ ನೀರು ಹೋಗಿರಬಹುದೆಂದು ಟ್ಯಾಂಕ್‌ನಿಂದ ಇಂಧನ ತೆಗೆಯುವಾಗ ಇದು ಪೆಟ್ರೋಲ್ ಅಲ್ಲ ಡೀಸೆಲ್ ಎಂದರು.
ಇತ್ತೀಚೆಗೆ ಶಾಸಕರೊಬ್ಬರ ಐಶಾರಾಮಿ ಕಾರಿಗೆ ಇಂಧನ ತುಂಬಿಸುವಾಗ ಮಂಗಳೂರಿನ ಪೆಟ್ರೋಲ್ ಬಂಕ್‌ವೊಂದರಲ್ಲಿ ಇದೇ ರೀತಿಯ ಘಟನೆ ನಡೆದಿರುವುದು ಪತ್ರಿಕೆಯಲ್ಲಿ ವರದಿಯಾಗಿತ್ತು.







