‘ಲಿಂಗಾಯತ ಪ್ರತ್ಯೇಕ ಧರ್ಮ’ಕ್ಕೆ ಸಿದ್ದಗಂಗಾ ಶ್ರೀಗಳ ಆಶೀರ್ವಾದ: ಸಚಿವ ಡಾ.ಎಂ.ಬಿ.ಪಾಟೀಲ
.jpg)
ಬೆಂಗಳೂರು, ಸೆ.10: ಲಿಂಗಾಯತ ಮತ್ತು ವೀರಶೈವ ಎರಡೂ ಬೇರೆ-ಬೇರೆಯಾಗಿದ್ದು, ‘ಲಿಂಗಾಯತ ಸ್ವತಂತ್ರ ಧರ್ಮ’ ಆಗಬೇಕು ಎಂದು ಸ್ವತಃ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳೆ ತಿಳಿಸಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಇಂದು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ಭೇಟಿಯಾಗಿ ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ಮಾತುಕತೆ ನಡೆಸಿದೆ. ಆಗ ಸ್ವತಃ ಶಿವಕುಮಾರ ಸ್ವಾಮಿಗಳೇ ವೀರಶೈವ-ಲಿಂಗಾಯತ ಎರಡೂ ಬೇರೆ ಬೇರೆ. ವೀರಶೈವ ಇತ್ತೀಚೆಗೆ ಸೇರಿಕೊಂಡಿದೆ. ಹೀಗಾಗಿ ಕೇವಲ ಲಿಂಗಾಯತ ಮಾತ್ರ ಪ್ರತ್ಯೇಕ ಧರ್ಮ ಆಗಲಿ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ನುಡಿದರು.
ಶಿವಕುಮಾರ ಸ್ವಾಮಿಗಳು ಏನು ಹೇಳಿದರೂ ಅದನ್ನೇ ನಾನು ಇಲ್ಲಿ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಹೇಳುವುದು ಸತ್ಯ. ಶ್ರೀಗಳ ಹೇಳಿಕೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಸ್ವಾಮೀಜಿಗಳು ನಮ್ಮ ನಾಡಿನ ಅಧುನಿಕ ಬಸವಣ್ಣ . ಹೀಗಾಗಿ ಶ್ರೀಗಳಿಂದಲೇ ಈ ವಿವಾದದ ಕುರಿತು ಸ್ಪಷ್ಟೀಕರಣ ಸಿಕ್ಕಿದೆ. ಇನ್ನು ಮುಂದೆ ನಮಗೆ ಈ ವಿಚಾರದಲ್ಲಿ ಯಾವ ಬುದ್ಧಿ ಜೀವಿಯ ಸ್ಪಷ್ಟೀಕರಣವೂ ಬೇಕಿಲ್ಲ. ಸಿದ್ದಗಂಗಾ ಶ್ರೀಗಳೇ ನಮಗೆ ಸುಪ್ರೀಂ ಎಂದು ಎಂ.ಬಿ ಪಾಟೀಲ್ ಹೇಳಿದರು.
ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಉದ್ಘಾಟನೆ ನಿಮಿತ್ತ ತುಮಕೂರಿಗೆ ತೆರಳಿದ್ದ ನಾನು ಸಿದ್ದಗಂಗಾ ಕಿರಿಯ ಶ್ರೀಗಳ ಆಹ್ವಾನದ ಮೇರೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿದ ನಂತರ ಶತಾಯುಷಿ, ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆಯಲು ಇಂದು ಭೇಟಿ ನೀಡಿದ್ದೇ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ತಾನು ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಮ್ಮ ಹೋರಾಟವನ್ನು ಗುರಿ ಮುಟ್ಟುವವರೆಗೂ ನಮಗೆ ತಾವು ಆಶೀರ್ವಾದ ಮಾಡಬೇಕು ಎಂದು ಕೇಳಿದಾಗ ಶಿವಕುಮಾರ್ ಸ್ವಾಮಿಗಳು ಖಂಡಿತ ಮುಂದುವರೆಯಿರಿ ಎಂದು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಇದೇ ವೇಳೆ ಪಾಟೀಲ್ ತಿಳಿಸಿದರು.







