ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಪರಿಶ್ರಮ ಅಗತ್ಯ: ನ್ಯಾ.ವಿನೀತ್ ಕೊಠಾರಿ
ಬೆಂಗಳೂರು, ಸೆ.10: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿ ವಿನೀತ್ ಕೊಠಾರಿ ಸಲಹೆ ನೀಡಿದ್ದಾರೆ.
ರವಿವಾರ ಶೇಷಾದ್ರಿಪುರ ಕಾನೂನು ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ 4ನೆ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕುಟುಂಬದಲ್ಲಿ ಸಮಸ್ಯೆ ಇದೆ ಹಾಗೂ ಇಂಗ್ಲಿಷ್ ಬರುವುದಿಲ್ಲ ಎಂದು ಹೇಳಿಕೊಂಡು ಹಿಂಜರಿಕೆಯಿಂದ ಇರುವ ಬದಲು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಮಾಜದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ನೀವು ಬೆಳೆದು ಈ ಸಮಸ್ಯೆಗಳನ್ನು ಹೊಗಲಾಡಿಸುವ ಕೆಲಸಮಾಡಬೇಕು. ಅಲ್ಲದೆ, ಕಾನೂನು ಕಾಲೇಜಿನಲ್ಲಿ ಓದುತ್ತಿರುವ ನಿಮಗೇಲ್ಲರಿಗೂ ಹಲವು ಜವಾಬ್ದಾರಿಗಳು ಇವೆ. ಹೀಗಾಗಿ, ಸಂವಿಧಾನ ಹಾಗೂ ವೃತ್ತಿಯನ್ನು ಗೌವಿಸಿ ಬೆಳೆಯಿರಿ ಎಂದು ಹೇಳಿದರು.
ಹೈಕೋರ್ಟ್ ಹಿರಿಯ ವಕೀಲ ಉದಯ ಹೊಳ್ಳ ಮಾತನಾಡಿ, ವಿದ್ಯಾರ್ಥಿಗಳು ಇಂಟರ್‌ನೆಟ್ ಹಾಗೂ ಗ್ರಂಥಾಲಯಗಳ ಸದುಪಯೋಗವನ್ನು ಪಡೆದುಕೊಂಡು ಜ್ಞಾನವನ್ನು ಸಂಪಾದಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಭಾರತೀಯರು ವಿಜ್ಞಾನ ಸಂಸ್ಥೆಯಾದ ನಾಸಾ, ಐಟಿ-ಬಿಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೆ ಆದ ಸಾಧನೆಯನ್ನು ಮಾಡಿದ್ದಾರೆ. ಹೀಗಾಗಿಯೇ ಭಾರತೀಯರು ಯಾವ ದೇಶಕ್ಕೆ ಹೋದರೂ ಅವರಿಗೆ ಗೌರವವಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಪೊನ್ನಣ್ಣ ಮತ್ತಿತರರು ಉಪಸ್ಥಿತರಿದ್ದರು.







