ಸತ್ವವುಳ್ಳ ಸಂಗೀತದ ಕಡೆಗಣನೆ ಸರಿಯಲ್ಲ: ಡಾ. ಕೆ.ಎಸ್.ನಿಸಾರ್ ಅಹ್ಮದ್

ಬೆಂಗಳೂರು, ಸೆ. 10: ನಮ್ಮ ದೇಶದ ಸತ್ವವುಳ್ಳ ಹಾಗೂ ಪರಂಪರೆಯ ಮೂಲ ಭಾಗವಾಗಿರುವ ಹಿಂದೂಸ್ಥಾನಿ ಸಂಗೀತವನ್ನು ಕಡೆಗಣಿಸುತ್ತಿರುವುದು ಬಹಳ ವಿಷಾದನೀಯ ಎಂದು ಪದ್ಮಶ್ರೀ ಪುರಸ್ಕೃತ, ನಾಡೋಜ ಡಾ.ಕೆ.ಎಸ್ ನಿಸಾರ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಆಯೋಜಿಸಿದ್ದ ಇನ್‌ಫೋಸಿಸ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದ ಪರಂಪರೆಯನ್ನು ನಾವೇ ಕಡೆಗಣಿಸುತ್ತಿರುವುದು ಬಹಳ ವಿಷಾದನೀಯ ಸಂಗತಿ. ನಮ್ಮ ಸಂಗೀತ ಹಾಗೂ ಪರಂಪರೆಯ ಬಹಳಷ್ಟು ಭಾಗಗಳ ಪರಿಚಯ ನಮ್ಮ ಇಂದಿನ ಯುವಜನಾಂಗಕ್ಕೆ ಇಲ್ಲ. ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿರುವ ಬಹಳಷ್ಟು ಮಂದಿಗೆ ನಮ್ಮ ಅಂತಃಸತ್ವವುಳ್ಳ ಹಿಂದೂಸ್ಥಾನಿ ಸಂಗೀತ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಉಸ್ತಾದ್ ಬಾಲೇಖಾನ್ ಅವರ ಪರಿಚಯ ನನಗೆ 1975ರಲ್ಲಿ ಆಯಿತು. ಶಿವಮೊಗ್ಗಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾಲೇಖಾನ್ ಅವರ ಸಂಗೀತ ವಿದ್ವತ್ ನೋಡಿ ನಾನು ದಂಗಾಗಿ ಹೋಗಿದ್ದೆ. ಆದರೆ ಬಾಲೇಖಾನ್ ಅವರ ಸೌಮ್ಯ ಹಾಗೂ ಮುಗ್ದ ವ್ಯಕ್ತಿತ್ವ ನನ್ನನ್ನು ಇನ್ನೂ ಹೆಚ್ಚು ಅವರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು.
ನಮ್ಮ ದೇಶದ ಕೆಲವೇ ಸಂಸ್ಥೆಗಳು ನಮ್ಮ ದೇಶದ ಪರಂಪರೆಯ ಭಾಗವಾಗಿರುವ ಸಂಗೀತವನ್ನು ಪ್ರಚುರ ಪಡಿಸುತ್ತಿವೆ. ಬಾಲೇಖಾನ್ ಟ್ರಸ್ಟ್, ಇನ್‌ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ ಸಂಗೀತಾಸಕ್ತರಿಗೆ ಇಂತಹ ವೇದಿಕೆಯನ್ನು ಒದಗಿಸಿರುವುದು ಶ್ಲಾಘನೀಯ ಎಂದರು.
ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಸಂಗೀತ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಇವರು ಪದ್ಮ ಪ್ರಶಸ್ತಿಗೂ ಅರ್ಹರು ಎಂದರು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು, ಬಾಲೇಖಾನ್ ಅವರು ನನ್ನ ಅಣ್ಣನಿಂದ್ದಂತೆ, ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಬಹಳ ಸಂತಸದ ವಿಷಯ ಎಂದರು.
ಧಾರವಾಡ ನಗರ ಉತ್ತರ ಮತ್ತು ದಕ್ಷಿಣ ಭಾರತದ ಕಲೆಗಳ ಸಂಗಮ ಸ್ಥಳವಾಗಿದೆ. ಅಂತಹ ಸಂಗಮ ಸ್ಥಳ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಉಸ್ತಾದ್ ಬಾಲೇಖಾನ್ ಅವರನ್ನು ನೋಡುವ ಹಾಗೂ ಅವರ ಸಂಗೀತ ಕೇಳುವ ಸದಾವಕಾಶ ನನಗೆ ಸಿಕ್ಕಿತ್ತು. ಬಾಲೆಖಾನ್ ಸಂಗೀತದಲ್ಲಿ ಕಿರಾಣಾ-ಗ್ವಾಲಿಯರ್ ಘರಾಣಗಳ ಶ್ರಮ್ಮಿಶ್ರಣವಿತ್ತು. ಅವರ ಕುಟುಂಬದವರು ಅವರ ಹೆಸರಿನಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ ಎಂದರು.
ಹಿಂದುಸ್ಥಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಉಸ್ತಾದ್ ಬಾಲೆಖಾನ್ ಸ್ಮರಣಾರ್ಥ ಪ್ರಶಸ್ತಿ, ಫಲಕ ಹಾಗೂ ಒಂದು ಲಕ್ಷ ರೂಗಳ ಚೆಕ್ ನೀಡಿ ಗೌರವಿಸಲಾಯಿತು. ಬಿಎನ್‌ಎಂ ಚಾರಿಟೀಸ್ ಟ್ರಸ್ಟ್‌ನ ಕಾರ್ಯದರ್ಶಿ ನಾರಾಯಣ ರಾವ್ ಆರ್ ಮಾನೆ, ಉಸ್ತಾದ್ ಬಾಲೆಖಾನ್ ಪುತ್ರ ಹಫೀಜ್ ಬಾಲೇಖಾನ್ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ರೈಸ್ ಬಾಲೇಖಾನ್ ಮತ್ತು ಹಫೀಸ್ ಬಾಲೇಖಾನ್ ಅವರು ಹಾಡಿರುವ ಮತ್ತು ಉಸ್ತಾದ್ ರಫೀಕ್ ಖಾನ್ ಮತ್ತು ಪಂಡಿತ್ ಶ್ರೀನಿವಾಸ್ ಜೋಶಿ ಅವರು ಸಂಗೀತ ಸಂಯೋಜನೆಯನ್ನು ಮಾಡಿರುವ ವಚನ ಸ್ವರಧಾರೆ ಸಿಡಿಯನ್ನು ಕೆ.ಎಸ್.ನಿಸಾರ್ ಅಹ್ಮದ್ ಬಿಡುಗಡೆಗೊಳಿಸಿದರು.







