ಕಟ್ಟೆ ತೆರವು ವಿವಾದ: ಭಕ್ತಕೋಡಿಯಲ್ಲಿ ಪ್ರತಿಭಟನೆ

ಪುತ್ತೂರು, ಸೆ. 10: ತಾಲೂಕಿನ ಭಕ್ತಕೋಡಿಯಲ್ಲಿ ನಿರ್ಮಿಸಲಾದ ಕಟ್ಟೆಯೊಂದನ್ನು ತೆರವುಗೊಳಿಸಿದ ಪೊಲೀಸರ ಮತ್ತು ಪಂಚಾಯತ್ ಕ್ರಮವನ್ನು ವಿರೋಧಿಸಿ ರವಿವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, 2016ರ ಏಪ್ರಿಲ್‌ನಲ್ಲಿ ನಿರ್ಮಿಸಿದ ಕಟ್ಟೆಗೆ ಶುಕ್ರವಾರ ಸಂಜೆ ಸಾರಣೆ ಮಾಡುತ್ತಿದ್ದ ಸಂಘಟನೆಯ ಕಾರ್ಯಕರ್ತರಿಗೆ ಕಟ್ಟೆ ನಿರ್ಮಾಣ ಕಾಮಗಾರಿಗೆ ಪಡೆದುಕೊಂಡಿರುವ ದಾಖಲೆಗಳನ್ನು ಇಲಾಖೆಗೆ ತೋರಿಸಿ, ಬಳಿಕ ಕಾಮಗಾರಿ ಮುಂದುವರಿಸುವಂತೆ ಪೊಲೀಸರು ಸೂಚಿಸಿದ್ದರು. ಅದರಂತೆ ಕಾರ್ಯಕರ್ತರು ಕೆಲಸ ನಿಲ್ಲಿಸಿದ್ದರು. ಆದರೆ ರಾತ್ರಿ ಸುಮಾರು 10 ಗಂಟೆಗೆ ಗ್ರಾ.ಪಂ. ಅಧ್ಯಕ್ಷ, ಪಿಡಿಒ ಮತ್ತು ಸಂಪ್ಯ ಎಸ್‌ಐ ಆಗಮಿಸಿ ಕಟ್ಟೆ ತೆರವು ಮಾಡಿದ್ದಾರೆ. ಕಟ್ಟೆ ನಿರ್ಮಿಸಿದ್ದು ತಪ್ಪು ಎಂದಾದರೆ ನೋಟಿಸ್ ನೀಡಬಹುದಿತ್ತು. ತೆರವುಗೊಳಿಸುವ ಮೂಲಕ ಪೊಲೀಸ್ ಇಲಾಖೆಯೇ ತಪ್ಪು ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.
ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೌಡಿಚ್ಚಾರಿನಲ್ಲಿ ಅಮಾಯಕರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕಣದಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೂ ಪ್ರಯತ್ನಿಸಿದ್ದ. ಇಂತಹ ಘಟನೆಗೆ ಯಾರು ಹೊಣೆ? ಇದೀಗ ಸಂಪ್ಯ ಠಾಣೆ ಎಸ್‌ಐ ಕಟ್ಟೆ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ನಾವು ತಪ್ಪು ಮಾಡಿದ್ದರೆ ನಮ್ಮ ವಿರುದ್ಧ ದೂರು ದಾಖಲಿಸಿ. ಇಲಾಖೆಯಿಂದ ತಪ್ಪಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ. ಒಬ್ಬಿಬ್ಬರು ಮಾಡುವ ತಪ್ಪಿನಿಂದ ಪೊಲೀಸ್ ಇಲಾಖೆಯೇ ತಲೆ ಗ್ಗಿಸುವಂತಾಗಿದೆ ಎಂದರು.
ಪೊಲೀಸ್ ಇಲಾಖೆ ತಿಳಿಸಿದ ಮೇರೆಗೆ ಪಿಡಿಒ ಹಾಗೂ ತಾನು ತೆರವು ಸ್ಥಳಕ್ಕೆ ಆಗಮಿಸಿದ್ದು, ಕಟ್ಟೆ ನಿರ್ಮಾಣ ವಿಚಾರದಲ್ಲಿ ಪಂಚಾಯತ್‌ಗೆ ಯಾವುದೇ ದೂರು ಬಂದಿಲ್ಲ. ತೆರವು ಮಾಡಲು ನಾವು ಯಾರಿಗೂ ಸೂಚನೆ ನೀಡಿಲ್ಲ ಎಂದು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಡಿ. ವಸಂತ ಪ್ರತಿಭಟನಕಾರರಿಗೆ ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ಈ ಬಗ್ಗೆ ವಿಚಾರಣೆ ನಡೆಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಕಾರರು ತೆರವು ನಡೆಸಿದ ಎಸ್‌ಐ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಮಾತುಕತೆ ನಡೆಸಿದ ಡಿವೈಎಸ್‌ಪಿ ಶ್ರೀನಿವಾಸ್ ಅವರು ಅಕ್ರಮ ಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ದೂರು ಬಂದ ಕಾರಣ ಪೊಲೀಸರು ಕಾನೂನು ಪ್ರಕಾರ ತೆರವು ಕಾರ್ಯ ಮಾಡಿದ್ದಾರೆ. ಸಂಘಟನೆಯ ವತಿಯಿಂದ ಸೂಚನಾ ಫಲಕಕ್ಕೆ ಮಾತ್ರ ಅನುಮತಿ ಪಡೆಯಲಾಗಿದ್ದು, ಅಲ್ಲಿ ಕಟ್ಟೆ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆಯಲಾಗಿಲ್ಲ. ಅನುಮತಿ ಪಡೆದು ಕಟ್ಟೆ ನಿರ್ಮಿಸಿದಲ್ಲಿ ಪೊಲೀಸ್ ಇಲಾಖೆ ಯಾವುದೇ ಅಡ್ಡಿ ಪಡಿಸುವುದಿಲ್ಲ ಎಂದು ಮನವರಿಕೆ ಮಾಡಿದರು.
ಸೋಮವಾರವೇ ಮತ್ತೊಮ್ಮೆ ಇಲಾಖೆಯಿಂದ ಅನುಮತಿ ಪಡೆಯುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಾ.ಪಂ. ಸದಸ್ಯ ಶಿವರಂಜನ್ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.







