ಗುರ್ಗಾಂವ್ ಶಾಲೆಯಲ್ಲಿ ವಿದ್ಯಾರ್ಥಿಯ ಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಆಡಳಿತ ಮಂಡಳಿ ವಿರುದ್ಧದ ಪ್ರತಿಭಟನೆ

ಗುರ್ಗಾಂವ್, ಸೆ. 10: ಏಳು ವರ್ಷದ ಬಾಲಕ ಪ್ರದ್ಯುಮ್ನನ ಹತ್ಯೆ ಖಂಡಿಸಿ ಗುರ್ಗಾಂವ್‌ನ ರ್ಯಾನ್ ಇಂಟರ್‌ನ್ಯಾಷನಲ್ ಶಾಲೆ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರವಿವಾರ ಸ್ಥಳೀಯರು ಮದ್ಯದಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಲಾಠಿ ಚಾರ್ಜ್ ನಡೆಸಿದರು.
ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನನ ಮೃತದೇಹ ಕತ್ತು ಸೀಳಿ ಕೊಲೆಗೈಯಲಾದ ಸ್ಥಿತಿಯಲ್ಲಿ ಶೌಚಾಲಯದಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಶಾಲೆಯಿಂದ 500 ಕಿ.ಮೀ. ದೂರದಲ್ಲಿರುವ ಮದ್ಯದಂಗಡಿಗೆ ಪ್ರತಿಭಟನಾ ನಿರತ ಪಾಲಕರು ಬೆಂಕಿ ಹಚ್ಚಿದರು. ಪ್ರಕರಣದ ತನಿಖೆಯಲ್ಲಿ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಶಾಲೆಯ ಕಿಟಕಿಯ ಗಾಜುಗಳನ್ನು ಪುಡಿಗೈದರು ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು. ಆಕ್ರೋಶಿತ ಪಾಲಕರು ಶಾಲೆಯ ಒಳಗೆ ನುಗ್ಗಲು ಯತ್ನಿಸಿದಾಗ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಆದರೆ, ಪ್ರತಿಭಟನಾಕಾರರು ಚದುರದೇ ಇದ್ದಾಗ ಪೊಲೀಸ್ ಪಡೆಯನ್ನು ಬಳಸಿ ಚದುರಿಸಿದರು.







